Select Your Language

Notifications

webdunia
webdunia
webdunia
webdunia

ಬಾಲಿವುಡ್ ಬಿರುಗಾಳಿ: ಸಾವರಿಯಾ, ಓಂ ಶಾಂತಿ ಓಂ

ಬಾಲಿವುಡ್ ಬಿರುಗಾಳಿ: ಸಾವರಿಯಾ, ಓಂ ಶಾಂತಿ ಓಂ
IFM
"ಬಾಲಿವುಡ್ ಬಾದಶಾ" ಶಾರೂಖ್ ಖಾನ್ ಅವರ ಚರಿಷ್ಮಾ ಮತ್ತು ತಾರಾ ಮೌಲ್ಯ ಹಾಗೂ ಕಪೂರ್ ಖಾನ್‌ದಾನ್‌ನ ಹೊಸಬರಿಬ್ಬರ ರಂಗ ಪ್ರವೇಶದ ಮಧ್ಯೆ, ಕ್ಲಾಶ್ ಆಫ್ ಟೈಟನ್ಸ್ ಎಂದೇ ಬಾಲಿವುಡ್ ಪಂಡಿತರಿಂದ ಕರೆಯಿಸಿಕೊಂಡ ಎರಡು ಚಿತ್ರಗಳು ಶುಕ್ರವಾರ ತೆರೆ ಕಂಡಿವೆ.

ಒಂದು, 42ರ ಹರೆಯದ ಶಾರೂಖ್ ಖಾನ್ ಮೈ ಬಿಚ್ಚಿ ಕುಣಿದದ್ದಕ್ಕೇ ಖ್ಯಾತಿ ಪಡೆದಿರುವ ಓಂ ಶಾಂತಿ ಓಂ ಹಾಗೂ ಇನ್ನೊಂದು ಚಿತ್ರ ಚೊಚ್ಚಲ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ ಹಾಗೂ ಸೋನಂ ಕಪೂರ್ ನಟಿಸಿರುವ "ಸಾವರಿಯಾ"..

ಫರಾ ಖಾನ್ ಅವರ ಓಂ ಶಾಂತಿ ಓಂ ಮತ್ತು ಸಂಜಯ್ ಲೀಲಾ ಭನ್ಸಾಲಿಯವರ ಸಾವರಿಯಾ ಮಧ್ಯೆ ಅಭೂತಪೂರ್ವ ಬಾಕ್ಸಾಫೀಸ್ ಕದನ ಏರ್ಪಟ್ಟಿದೆ. ಚಿತ್ರಗಳ ಬಿಡುಗಡೆಗಾಗಿ ಸಾಕಷ್ಟು ಪ್ರಚಾರ, ಮಾರಾಟ ಉತ್ತೇಜಕ ಕಾರ್ಯಕ್ರಮಗಳು, ತಾರಾಗಣ ಎಲ್ಲವೂ ಅದ್ದೂರಿಯಾಗಿಯೇ ಇದ್ದರೂ, ಅಂತಿಮವಾಗಿ ಇದರ ಫಲ ಪಡೆಯುವುದು ವಿತರಕರು ಮತ್ತು ಪ್ರದರ್ಶಕರು ಎಂಬುದು ಕೂಡ ಅಷ್ಟೇ ಸತ್ಯ.

ಓಂ ಶಾಂತಿ ಓಂನಲ್ಲಿ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆಯ ಗ್ಲ್ಯಾಮರ್ ಹಾಗೂ ಸಾವರಿಯಾದಲ್ಲಿ ರಣಬೀರ್-ಸೋನಮ್ ಕಪೂರರ ಹೊಸ ಮುಖಗಳು ಈಗಾಗಲೇ ಬೆಳ್ಳಿತೆರೆಯನ್ನು ದೀಪಾವಳಿಯ ಬೆಳಕಿನ ರೀತಿಯಲ್ಲಿ ಬೆಳಗುತ್ತಿದ್ದು, ಬಾಲಿವುಡ್‌ನಲ್ಲಿ ಯಾವುದೇ ಅದ್ದೂರಿ ಹಿಟ್ ಚಿತ್ರಗಳಿಲ್ಲದೆ ಬಾಕ್ಸಾಫೀಸಿನಲ್ಲಿ ಸುದೀರ್ಘಕಾಲದಿಂದ ಕಂಡುಬಂದ ಪ್ರಶಾಂತ ಸ್ಥಿತಿ ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರದರ್ಶಕರು ಮತ್ತು ವಿತರಕರ ಜೇಬು ತುಂಬಲಾರಂಭಿಸಿದ್ದು, ವಿಶ್ವಾದ್ಯಂತ ಈ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದವು.

webdunia
IFM
ಸಾವರಿಯಾ ಮತ್ತು ಓಂ ಶಾಂತಿ ಓಂ ಚಿತ್ರಗಳ ಕುರಿತ ಅಬ್ಬರದ ಅತಿಶಯ ಪ್ರಚಾರವೇ ಇದಕ್ಕೆಲ್ಲಾ ಕಾರಣವಾಗಿದ್ದು, ದೆಹಲಿಯ ಸಿನೆಮಾ ಮಂದಿರಗಳಲ್ಲಂತೂ ಹೌಸ್‌ಫುಲ್ ಬೋರ್ಡ್ ಸಾಮಾನ್ಯವಾಗಿ ಕಂಡುಬಂದಿದೆ. ಕಳೆದ ಕೆಲವು ಸಮಯದಿಂದ ಇಂಥದ್ದೊಂದು ಸ್ಥಿತಿ ನಿರ್ಮಣವಾಗಿರಲಿಲ್ಲ. ಬಿಡುಗಡೆಯ ಮೊದಲೇ ಅಡ್ವಾನ್ಸ್ ಬುಕಿಂಗ್ ಅಂತೂ ತೀವ್ರಗತಿಯಲ್ಲಿ ನಡೆದಿದೆ ಎಂದು ಔದ್ಯಮಿಕ ಮೂಲಗಳು ಖಚಿತಪಡಿಸಿವೆ.

ಕ್ರಿಶ್ ಮತ್ತು ಧೂಮ್ 2 ಮುಂತಾದ ಕೆಲವು ಚಿತ್ರಗಳನ್ನು ಹೊರತುಪಡಿಸಿ ಈ ರೀತಿಯ ಅಡ್ವಾನ್ಸ್ ಬುಕಿಂಗ್ ಯಾವುದಕ್ಕೂ ನಡೆದಿರಲಿಲ್ಲ. ಓಂ ಶಾಂತಿ ಓಂ ಮತ್ತು ಸಾವರಿಯಾ ಚಿತ್ರಗಳ ಅಡ್ವಾನ್ಸ್ ಬುಕಿಂಗ್‌ನ ತೀವ್ರತೆ ನೋಡಿದರೆ ಇದು ಬಾಲಿವುಡ್‌ನಲ್ಲಿ ಅತ್ಯುತ್ತಮ ಬೆಳವಣಿಗೆ ಎನ್ನುತ್ತಾರೆ ವಿಶ್ಲೇಷಕರು.

ಅಡ್ವಾನ್ಸ್ ಬುಕಿಂಗ್ ಕಳೆದ ಸೋಮವಾರ ಆರಂಭವಾದ ತಕ್ಷಣವೇ ವಾರಾಂತ್ಯದ ಪ್ರದರ್ಶನಗಳಿಗೆ ಟಿಕೆಟ್ ಅದಾಗಲೇ ಖಾಲಿಯಾಗತೊಡಗಿತ್ತು. ಒಂದೇ ಪರದೆ ಇರುವ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲೂ ಇದೇ ಪರಿಸ್ಥಿತಿ. ದೆಹಲಿಯ ಕೆಲವು ಮಲ್ಟಿಪ್ಲೆಕ್ಸ್‌ಗಳು ದಿನವೊಂದಕ್ಕೆ ಎಂಟರಿಂದ 10 ಪ್ರದರ್ಶನಗಳನ್ನು ಏರ್ಪಡಿಸಿದರೂ ಈ ರಶ್ ಮುಗಿಯುತ್ತಿಲ್ಲ ಎಂಬುದು ವಿಶೇಷವಾಗಿ ಗಮನಿಸಬೇಕಾದ ಅಂಶ.

ಎರಡು ಚಿತ್ರಗಳಲ್ಲಿ, ಓಂ ಶಾಂತಿ ಓಂ ಚಿತ್ರವು ಶಾರೂಖ್ ಖಾನ್ ಅವರ ಸ್ಟಾರ್ ಪವರ್‌ನಿಂದ ಮತ್ತು ತೀರಾ ಇತ್ತೀಚೆಗಿನ ಚಕ್ ದೇ ಇಂಡಿಯಾದ ಯಶಸ್ಸಿನ ಅಲೆಯಿಂದಾಗಿಯೇ ಹೆಚ್ಚು ಹೈಪ್ ಗಳಿಸಿದೆ. ಶಿಮಿತ್ ಅಮೀನ್ ಅವರ ಈ ಚಿತ್ರದಲ್ಲಿ ಶಾರೂಖ್ ಅವರು ಭಾರತೀಯ ಮಹಿಳಾ ಹಾಕಿ ತಂಡವನ್ನು ವಿಶ್ವಕಪ್ ಗೆಲ್ಲಿಸುವ ಕೋಚ್ 'ಕಬೀರ್ ಖಾನ್' ಆಗಿ ಅತ್ಯದ್ಭುತ ಅಭಿನಯ ನೀಡಿದ್ದರು.

ಇದಲ್ಲದೆ ಶಾರೂಖ್ ಖಾನ್ ಅವರು ಈ ಚಿತ್ರದ ಹಾಡೊಂದರಲ್ಲಿ ಅರೆಬೆತ್ತಲೆ ಮೈಯಲ್ಲಿ, ತನ್ನ ಸ್ನಾಯುಖಂಡಗಳನ್ನು ತೋರಿಸುತ್ತಾ ನರ್ತಿಸಿರುವುದು ಮತ್ತೊಂದು ಹೈಪ್‌ಗೆ ಕಾರಣವಾಗಿತ್ತು.

ಇತ್ತಕಡೆ, ಸಾವರಿಯಾದಲ್ಲಿ ರಿಷಿ ಕಪೂರ್ ಪುತ್ರ ರಣಬೀರ್ ಕಪೂರ್ ಹಾಗೂ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ತೆರೆಗೆ ಮೊದಲ ಬಾರಿಗೆ ಪ್ರವೇಶಿಸಿರುವುದು ತಾರಾ ಮೌಲ್ಯ ಹೆಚ್ಚಿಸಿ, ಕುತೂಹಲವನ್ನೂ ಮೂಡಿಸಿ ಹೈಪ್ ಹುಟ್ಟಿಸಿದೆ. ಇದರಲ್ಲೂ ರಣಬೀರ್ ಕಪೂರ್ ಮೈಬಿಚ್ಚಿ ಸ್ನಾಯುಖಂಡಗಳ ಪ್ರದರ್ಶನದ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.

Share this Story:

Follow Webdunia kannada