Select Your Language

Notifications

webdunia
webdunia
webdunia
webdunia

ಪ್ರೇಕ್ಷಕನಿಗೇ ಬಿಡಿಲಾಗದ ಕಗ್ಗಂಟು 'ಆ ದೇಖೇ ಝರಾ'

ಪ್ರೇಕ್ಷಕನಿಗೇ ಬಿಡಿಲಾಗದ ಕಗ್ಗಂಟು 'ಆ ದೇಖೇ ಝರಾ'
IFM
ಒಂದು ಸುಂದರ ಇಂಟರೆಸ್ಟಿಂಗ್ ಕಥೆಯನ್ನು ಆಲೋಚಿಸುವುದಕ್ಕೂ, ಅದನ್ನು ಹಾಗೆಯೇ ಪರದೆಗೆ ತರುವುದಕ್ಕೂ ತುಂಬ ವ್ಯತ್ಯಾಸವಿದೆ. ಹಾಗೂ ಕಷ್ಟಸಾಧ್ಯ ಎಂಬುದಕ್ಕೆ 'ಆ ದೇಖೇ ಝರಾ'ಕ್ಕಿಂತ ಉತ್ತಮ ಉದಾಹರಣೆ ಸದ್ಯಕ್ಕೆ ಬೇರೆ ಸಿಗಲಿಕ್ಕಿಲ್ಲ. ಅಜ್ಜನಿಂದ ಬಳುವಳಿಯಾಗಿ ಬಂದ ಕ್ಯಾಮರಾ ಮೂಲಕವೇ ಉತ್ತಮ ಭವಿಷ್ಯ ಕಾಣುವ ಫೋಟೋಗ್ರಾಫರ್ ಜೀವನದ ಸುತ್ತ ಹೆಣೆದ ಥ್ರಿಲ್ಲರ್ ಕಥಾನಕ ಇದು. ಕ್ಯಾಮರಾ ಮೂಲಕ ಭವಿಷ್ಯ ಎಂಬ ಒಂದು ಇಂಟರೆಸ್ಟಿಂಗ್ ಕಲ್ಪನೆ ಎಂಥಾ ಐಡಿಯಾ! ಆದರೆ, 'ಆ ದೇಖೇ ಝರಾ' ಇಂತಹ ಉತ್ತಮ ಐಡಿಯಾದ ತಳಹದಿಯಲ್ಲೇ ಇದ್ದರೂ, ಮೊದಲರ್ಧ ಕುತೂಹಲಕಾರಿಯಾಗಿ ಸಾಗಿದರೂ ನಂತರ ತನ್ನ ಕುತೂಹಲ ಕಾಯ್ದಿರಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನಬಹುದೇನೋ.

'ಆ ದೇಖೇ ಝರಾ' ಒಂದು ಥ್ರಿಲ್ಲರ್. ಮೊದಲರ್ಧದಲ್ಲಿ ಇದು ತುಂಬ ಕುತೂಹಲಕಾರಿಯಾಗಿ ಮೂಡಿ ಬಂದರೂ, ಕೊನೆಯಲ್ಲಿ ಪ್ರೇಕ್ಷಕನನ್ನು ಸಿಕ್ಕಾಪಟ್ಟೆ ಕನ್‌ಫ್ಯೂಸ್ ಮಾಡಿಬಿಡುತ್ತದೆ. ಬಹುಶಃ ಕಥೆ ಬರೆದಾತನೇ ಹಲವು ಐಡಿಯಾಗಳ ಅಲೆಯಲ್ಲೇ ಕೊಚ್ಚಿಹೋದನೇನೋ. ಅಂತ್ಯದಲ್ಲಂತಲೂ ಪ್ರೇಕ್ಷಕನಿಗೆ ಇಡೀ ಚಿತ್ರವೇ ಬಿಡಿಸಲಾಗದ ಕಗ್ಗಂಟಿನಂತೆ ಗೋಚರವಾಗುತ್ತದೆ.

ರೇ (ನೀಲ್ ನಿತಿನ್ ಮುಖೇಶ್) ಒಬ್ಬ ಛಾಯಾಗ್ರಾಹಕ. ಆದರೆ ಅವನ ಅಜ್ಜನಿಂದ ಬಳುವಳಿಯಾಗಿ ಬಂದ ಒಂದು ವಿಶೇಷ ಕ್ಯಾಮರಾ ಅವನಿಗೆ ಬರುವವರೆಗೂ ಆತ ಏನೂ ಆಗಿರುವುದಿಲ್ಲ. ಒಬ್ಬ ಸಾಮಾನ್ಯ ಫೋಟೋಗ್ರಾಫರ್ ಅಷ್ಟೆ. ಆಧರೆ ಅಜ್ಜನ ಕ್ಯಾಮರಾ ಬಳಸಿದ್ದೇ ಬಳಸಿದ್ದು, ಆತನ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನೇ ಅದು ಅವನಿಗೆ ತಂದುಕೊಡುತ್ತದೆ. ಇದನ್ನು ಸ್ವತಃ ಅವನೇ ಕನಸು ಕಂಡಿರಲಿಲ್ಲ.

webdunia
IFM
ಅಜ್ಜನ ಕ್ಯಾಮರಾ ಆತನ ಜೀವನದಲ್ಲಿ ಹೊಸ ವಸಂತವನ್ನೇ ಸೃಷ್ಟಿಸುತ್ತದೆ. ಅವನ ಜೀವನಶೈಲಿಯೂ ಬದಲಾಗುತ್ತದೆ. ಆತನಿಗೆ ಒಬ್ಬ ಡಿಜೆ ಹುಡುಗಿ ಸಿಮಿ (ಬಿಪಾಶಾ ಬಸು) ಪರಿಚಯವಾಗುತ್ತಾಳೆ. ಆತನ ಜೀವನದಲ್ಲಿ ಹೀಗಾಗಿ ಪ್ರೇಮವೂ ಅಂಕುರಿಸುತ್ತದೆ. ಹೀಗೆ ಎಲ್ಲವೂ ಸುಂದರವಾಗಿ ಸಾಗುತ್ತಿರುವಾಗ ರೇಯ ಜೀವನದಲ್ಲಿ ಬಹುದೊಡ್ಡ ಜವಾಬ್ದಾರಿ ಬಂದೊದಗುತ್ತದೆ. ಅದು ಅಪಾಯಕಾರಿಯೂ ಹೌದು. ಇಷ್ಟರವರೆಗೆ ಧುತ್ತನೆ ಬಂದೊಂದಗಿದ ಒಳ್ಳೆಯ ದಿನಗಳಂತೆ ವಿಧಿಯ ಕ್ರೂರತೆಯೂ ಅವನ ಪಾಲಿಗಿರುತ್ತದೆ ಎಂಬ ಸತ್ಯ ಚಿತ್ರದ ಉತ್ತರಾರ್ಧದಲ್ಲಿ ಗೋಚರವಾಗುತ್ತದೆ.

ನಿರ್ದೇಶಕ ಜಹಾಂಗಿರ್ ಸುರ್ತಿ ಅವರಿಗೆ ನಿಜವಾಗಿಯೂ ದೃಶ್ಯಮಾಧ್ಯಮದ ಸಾಮರ್ಥ್ಯದ ಅರಿವಿದೆಯೆಂದು ಈ ಚಿತ್ರದಲ್ಲಿ ಕಂಡರೂ, ಅದನ್ನು ಸರಿಯಾದ ರೀತಿಯಲ್ಲಿ ಜನರಿಗೆ ನೀಡುವಲ್ಲಿ ಎಡವಿದ್ದಾರೆ. ಒಂದು ಅದ್ಭುತ ಥ್ರಿಲ್ಲರ್ ಕಥಾನಕ ನೀಡುವಾಗ ರಹಸ್ಯ ಇದ್ದೇ ಇರಬೇಕು ನಿಜ. ಆದರೆ ಚಿತ್ರ ಕೊನೆಗೊಂಡ ಮೇಲೂ ಆ ರಹಸ್ಯ ಬಿಡಿಸಲು ಪ್ರೇಕ್ಷಕನಿಗೂ ಆಗದಿದ್ದರೆ, ಚಿತ್ರ ನೋಡಿ ಏನು ಪ್ರಯೋಜನ ಹೇಳಿ. ಆ ದೇಖೇ ಝರಾವೂ ಕೂಡಾ ಕೊನೆಯಲ್ಲಿ ಪ್ರೇಕ್ಷಕನಲ್ಲೇ ದ್ವಂದ್ವ ಉಳಿಸುತ್ತದೆ.

ಚಿತ್ರ ನೋಡಲು 15 ನಿಮಿಷ ಕೂತರೆ ಸಾಕು ನೀಲ್ ನಿತಿನ್‌ ಜಗತ್ತು ನಮ್ಮನ್ನು ಸೆಳೆದುಬಿಡುತ್ತದೆ. ಆತ ಒಂದು ಲಾಟರಿ, ರೇಸ್ ಗೆದ್ದಂತೆ ಚಿತ್ರದುದ್ದಕ್ಕೂ ನಮಗೆ ನೀಲ್ ಜಗತ್ತು ಉಲ್ಲಾಸಗೊಳಿಸುತ್ತದೆ. ನಂತರ ಕೆಟ್ಟ ಶಕ್ತಿಯ ಪಾತ್ರವಾಗಿ ಬರುವ ರಾಹುಲ್ ದೇವ್ ಕೂಡಾ ಚೆನ್ನಾಗೇ ಅಭನಯಿಸಿದ್ದಾರೆ. ಆದರೆ ನಂತರ ಈ ಪ್ಲಾಟ್ ಆಮೇಲೆ ಜಡವಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ಮೊದಲ ಒಂದು ಗಂಟೆ ಅದ್ಭುತ.

ನೀಲ್ ಹಾಗೂ ಬಿಪಾಶಾ ಪಬ್‌ನ ಮಹಡಿಯಿಂದ ಇದ್ದಕ್ಕಿದ್ದಂತೆ ಕೆಳಕ್ಕೆ ನೆಗೆಯುತ್ತಾರೆ. ಅವರಿಬ್ಬರೂ ನೆಗೆದಿದ್ದು ಕೆಳಗಿರುವ ಕೊಳಕ್ಕೆ. ಇಂತಹ ಹಲವು ಸೀನ್‌ಗಳು ಬೆಕ್ಕು- ಇಲಿಯ ಆಟದಂತೆ ಕೊನೆಯವರೆಗೂ ಪ್ರೇಕ್ಷಕನನ್ನು ಕಷ್ಟಕ್ಕೆ ಈಡುಮಾಡುತ್ತದೆ. ಸ್ಕ್ರಿಪ್ಟ್ ಬಡವಾಗಿದೆ. ಆದರೂ, ಸಂಗೀತ ಮಾತ್ರ ಹೃದಯಕ್ಕೆ ನಾಟುತ್ತದೆ. ಎಲ್ಲ ಹಾಡುಗಳೂ ಎನರ್ಜೆಟಿಕ್ ಹಾಗೂ ಯೌವನಭರಿತವಾಗಿವೆ. ಚಿತ್ರ ಈವರೆಗೆ ಇಷ್ಟೊಂದು ಕುತೂಹಲ ಹುಟ್ಟಿಸಿದ್ದಕ್ಕೆ ಕಾರಣವೂ ಇದೆ. ಯಾಕೆಂದರೆ ಇದರ ಸಿನೆಮಾಟೋಗ್ರಫಿಯೂ ಅದ್ಭುತವಾಗಿದೆ.

ನೀಲ್ ನಿತಿನ್ ನಟನೆ ಚೆನ್ನಾಗಿದೆ. ತನ್ನ ಮೊದಲ ಚಿತ್ರದಲ್ಲೇ ಈ ನಾಯಕ ಭರವಸೆ ಮೂಡಿಸುತ್ತಾರೆ. ಮುಂಬರುವ ಚಿತ್ರಗಳಲ್ಲಿ ಆತನಿಗೆ ಅದ್ಭುತ ನಟನಾ ಅವಕಾಶವೂ ಸಿಗಬಹುದು ಎಂದು ಮೊದಲ ಚಿತ್ರದ ಅಭಿನಯದ ಆಧಾರದಲ್ಲೇ ಹೇಳಬಹುದು. ಬಿಪಾಶಾ ತಮ್ಮ ಎಂದಿನ ಅಭಿನಯ ನೀಡಿರುವ ಜತೆಗೆ ತಮ್ಮ ಹೊಸ ಲುಕ್‌ನಿಂದ ಸುಂದರವಾಗಿ ಕಾಣುತ್ತಾರೆ. ರಾಹುಲ್ ದೇವ್ ನೆಗೆಟಿವ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಒಟ್ಟಾರೆ ಚಿತ್ರ ಒಕೆ. ಆದರೆ ಈ ಚಿತ್ರ ಒಂದು ಸುಂದರ ಸಂಗೀತವನ್ನು ವೀಕೆಂಡ್ ಕುಣಿತಕ್ಕೆ ಉಡುಗೊರೆಯಾಗಿ ನೀಡಿರುವುದಂತೂ ಸತ್ಯ.
webdunia
IFM

Share this Story:

Follow Webdunia kannada