Select Your Language

Notifications

webdunia
webdunia
webdunia
webdunia

ಉತ್ತರ ಸಿಗದ ಅಮೂರ್ತ ಈ ಸಿದ್ದಾರ್ಥ!

ಉತ್ತರ ಸಿಗದ ಅಮೂರ್ತ ಈ ಸಿದ್ದಾರ್ಥ!
ಸಿದ್ದಾರ್ಥ ತನ್ನ ಪ್ರಶ್ನೆಗಳಿಗೆ ಉತ್ತರ ಸಿಗದೆ ಗೌತಮ ಬುದ್ಧನಾದ ಕಥೆ ಎಲ್ಲರಿಗೆ ಗೊತ್ತು. ಆದರೆ ಈ ಸಿದ್ದಾರ್ಥನನ್ನು ನೋಡಿದರೆ ಪ್ರೇಕ್ಷಕರು ಬುದ್ಧರಾದರೆ ಯಾವ ಲಾಭವೂ ಸಿಗಲಿಕ್ಕಿಲ್ಲ. ಬಹುಷಃ `ಸಿದ್ದಾರ್ಥ್- ದಿ ಪ್ರಿಸನರ್' ಚಿತ್ರ ಸೋಲುವುದೇ ಇಲ್ಲಿ. ಯಾಕೆಂದರೆ, ಸಾಮಾನ್ಯ ವರ್ಗದ ಪ್ರೇಕ್ಷಕರನ್ನು ಇದು ಹೆಚ್ಚು ಹೊತ್ತು ಥಿಯೇಟರ್‌ನಲ್ಲಿ ಕೂರುವಂತೆ ಮಾಡುವುದಿಲ್ಲ.

ಒಂದು ಸಾಂಪ್ರದಾಯಿಕವಲ್ಲದ ಸಿನಿಮಾಕ್ಕೂ ಪ್ರಾಯೋಗಿಕ ಸಿನಿಮಾಕ್ಕೂ ಕೇವಲ ಒಂದು ತೆಳುಗೆರೆಯಷ್ಟು ಮಾತ್ರ ವ್ಯತ್ಯಾಸವಿರುತ್ತದೆ. ಸಿದ್ದಾರ್ಥ್- ದಿ ಪ್ರಿಸನರ್ ಚಿತ್ರದ ನಿರ್ದೇಶಕ ಪ್ರಿಯಾಸ್ ಗುಪ್ತಾ ಇಂಥದ್ದೇ ಒಂದು ತೆಳು ಗೆರೆಯನ್ನು ಪ್ರೇಕ್ಷಕರು ಮತ್ತು ಸಿನಿಮಾದ ನಡುವೆ ಇಟ್ಟಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಇಂತಹ ಪ್ರಯೋಗ ಹೊಸತಾದರೂ, ಅಮೂರ್ತ ಕಲ್ಪನೆಯನ್ನು ಕಟ್ಟಿಕೊಡುವ ಚಿತ್ರ ಸಿದ್ದಾರ್ಥ್ ಕಮರ್ಶಿಯಲ್ ಪ್ಲಾಟ್‌ಫಾರ್ಮ್‌ನಲ್ಲೂ ಗಟ್ಟಿಯಾಗಿ ನಿಲ್ಲಬಲ್ಲ ಕಥಾವಸ್ತುವನ್ನು ಹೊಂದಿಲ್ಲ.

IFM
ಸಿದ್ದಾರ್ಥ (ರಜತ್ ಕಪೂರ್) ಆಗಷ್ಟೆ ಜೈಲಿನಿಂದ ಹೊರಬಂದ ಒಬ್ಬ ಪ್ರಖ್ಯಾತ ಬರಹಗಾರ. ಜೈಲಿನಲ್ಲೇ ತಾನು ಮುಂದೆ ಹೊರತರಲಿರುವ ಪುಸ್ತಕದ ಹಸ್ತಪ್ರತಿ ಬರೆದು ಮುಗಿಸಿರುತ್ತಾನೆ. ಹೊರಗಿನ ಪ್ರಪಂಚಕ್ಕೆ ಬಂದಾಗ ತನ್ನ ಹೊಸ ಪುಸ್ತಕ ಬಿಡುಗಡೆಯಾಗಿ ಹಳೆಯ ಪ್ರಖ್ಯಾತಿಯನ್ನು ಮತ್ತೆ ಗಳಿಸುವ ಹಾಗೂ ಆ ಮೂಲಕ ತಾನು ಕಳೆದುಕೊಂಡ ಪತ್ನಿ ಮಾಯಾಳನ್ನು ಮತ್ತೆ ಪಡೆಯಬೇಕು ಎಂಬ ಭಾವನೆಯಲ್ಲಿ ಬದುಕು ಆರಂಭಿಸುತ್ತಾನೆ.

ಹೀಗಿರುವಾಗ ಒಂದು ದಿನ ಸೈಬರ್ ಕೆಫೆಯಲ್ಲಿ ತನ್ನ ಪುಸ್ತಕದ ಹಸ್ತಪ್ರತಿ ಹೊತ್ತ ಬ್ರೀಫ್‌ಕೇಸ್ ಅಂತಹುದೇ ಮತ್ತೊಂದು ಬ್ರೀಫ್‌ಕೇಸ್ ಜತೆಗೆ ಅದಲು ಬದಲಾಗುತ್ತದೆ. ಬದಲಿಯಾಗಿ ಬಂದ ಬ್ರೀಫ್‌ಕೇಸಿನಲ್ಲಿ ದೊಡ್ಡ ಮೊತ್ತದ ಹಣವಿರುತ್ತದೆ. ಕಳೆದುಹೋದ ಹಣವನ್ನು ಮತ್ತೆ ಹುಡುಕಿಕೊಡಬೇಕೆಂಬ ಬಾಸ್‌ನ ಒತ್ತಡ ಸೈಬರ್ ಕೆಫೆ ಮ್ಯಾನೇಜರ್ ಮೋಹನ್ (ಸಚಿನ್ ನಾಯಕ್) ಮೇಲಿರುತ್ತದೆ. ಹೀಗೆ ಕಥೆ ಸಾಗುತ್ತದೆ.

ನಿರ್ದೇಶಕ ಪ್ರಿಯಾಸ್ ದಾಸ್ ಗುಪ್ತಾ ಅವರು ಮೊದಲ ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಬೋರ್ ಹೊಡೆಸುತ್ತಾರೆ. ಅತಿ ಹೆಚ್ಚು ಪಾತ್ರಗಳು ಬಂದು ಹೋಗುತ್ತದೆ. ನಿಲ್ಲುವುದಿಲ್ಲ. ಆದರೆ, ಕಥೆಯ ಆರಂಭವೇ ಮೊದಲ ಒಂದು ಗಂಟೆಯಲ್ಲಿ ದಕ್ಕುವುದಿಲ್ಲ. ಗುಪ್ತಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವಂತೆ ಅನಿಸುತ್ತದೆ.ಕಥೆಯ ಉತ್ತರಾರ್ಧವೂ ಅಷ್ಟೆ, ಪ್ರೇಕ್ಷಕರನ್ನು ಸೀಟಿನಲ್ಲಿ ಹಿಡಿದು ಕೂರಿಸುವಷ್ಟು ತಾಕತ್ತು ಪ್ರದರ್ಶಿಸುವುದಿಲ್ಲ. ಹೆಚ್ಚು ಸಂದೇಹಗಳನ್ನೇ ಸೃಷ್ಟಿಸುತ್ತದೆ. ಚಿತ್ರದಲ್ಲಿ ಸಂದೇಶವಿದ್ದರೂ ಪ್ರೇಕ್ಷಕರಿಗೆ ಅರ್ಥವಾಗುವಂತಿಲ್ಲ. ಹಲವು ಪ್ರಶ್ನೆಗಳಿಗೆ ಚಿತ್ರದುದ್ದಕ್ಕೂ ಉತ್ತರವೇ ದಕ್ಕುವುದಿಲ್ಲ.

ಚಿತ್ರ ರಜತ್ ಕಪೂರ್ ಜೈಲಿನಿಂದ ಹೊರಬರುವ ಚಿತ್ರಣದಿಂದ ಶುರುವಾಗುತ್ತದೆ. ಅಂತಹ ಪ್ರಖ್ಯಾತ ಬರಹಗಾರ ಸಿನಿಮಾದುದ್ದಕ್ಕೂ ಬಾರ್‌ಗಳಲ್ಲೇ ಯಾಕೆ ಸುತ್ತಾಡುತ್ತಾನೆ ಎಂಬುದೇ ನಿಗೂಢ. ಚಿತ್ರದ ಅಂತ್ಯವೂ ನಿಗೂಢವಾಗಿಯೇ ತೋರುತ್ತದೆ. ಉಳಿದಂತೆ ನಿರ್ದೇಶನ ಸುಮಾರು. ಚಿತ್ರಕಥೆಯೂ ಸುಮಾರು. ರಜತ್ ಕಪೂರ್‌ಗೆ ನಿರ್ದೇಶಕರು ಹೆಚ್ಚಿಗೆ ಮಾತನಾಡಲು ಕೊಟ್ಟಿಲ್ಲ. ಅಭಿನಯಕ್ಕೂ ಅಷ್ಟಾಗಿ ಅವಕಾಶಗಳು ಈ ಸಿನಿಮಾದಲ್ಲಿ ಕಾಣುವುದಿಲ್ಲ. ಆದಾಗ್ಯೂ ರಜತ್ ಇದ್ದುದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಚಿನ್ ನಾಯಕ್ ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರದೀಪ್ ಕಾಬ್ರಾ ಅಭಿನಯ ಜಾಳು ಜಾಳು. ಒಟ್ಟಾರೆ ಚಿತ್ರ ಸುಮಾರು. ಸೀಟಿನಿಂದೇಳುವಾಗ ಹಲವು ಪ್ರಶ್ನೆಗಳಿಗೆ ಉತ್ತರವೇ ನಿಲುಕುವುದಿಲ್ಲ ಎಂಬುದು ಸತ್ಯ.
webdunia
IFM

Share this Story:

Follow Webdunia kannada