Select Your Language

Notifications

webdunia
webdunia
webdunia
webdunia

ಮುತ್ತು ರತ್ನಗಳನ್ನು ಬಳ್ಳದಲ್ಲಿ ಅಳೆದ ನಾಡು ಹಂಪಿ

ಮುತ್ತು ರತ್ನಗಳನ್ನು ಬಳ್ಳದಲ್ಲಿ ಅಳೆದ ನಾಡು ಹಂಪಿ

ಇಳಯರಾಜ

ವಿಜಯ ನಗರದ ಸಾಮ್ರಾಜ್ಯದ ಉತ್ತುಂಗದ ದಿನಗಳಲ್ಲಿ ಮುತ್ತು ರತ್ನಗಳನ್ನು ಬೀದಿಬದಿಗಳಲ್ಲಿ ರಾಶಿಹಾಕಿ ಬಳ್ಳದಲ್ಲಿ ಅಳೆದು ಮಾರಲಾಗುತ್ತಿತ್ತು ಎಂಬ ವಿಚಾರವನ್ನು ಚರಿತ್ರೆಯ ಪುಸ್ತಕಗಳಲ್ಲಿ ಶಾಲಾದಿನಗಳಲ್ಲಿ ಓದಿದ್ದೆ.

ಬಳಿಕ, ಹಾಳುಮೂಳು ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ ಇತಿಹಾಸವನ್ನು ಬಗೆಬೆಗೆದು ಒದಬೇಕಾದ ಅನಿವಾರ್ಯತೆ ಉಂಟಾದಾಗ, ಕನಿಷ್ಠ ಒಂದೊಂದು ಮುತ್ತು ರತ್ನಗಳನ್ನೂ ಹೊಂದಲಾಗದ ಪರಿಸ್ಥಿತಿಯ ನನಗೆ, ಮುತ್ತುರತ್ನಗಳು ರಾಶಿ ಸುರಿಯುತ್ತಿದ್ದ ಆ ಬೀದಿಗಳನ್ನು ಒಮ್ಮೆಯಾದರೂ ಕಣ್ಣಲ್ಲಿ ತುಂಬಿಕೊಳ್ಳಬೇಕೆಂಬುದು ಬಹುದಿನದ ವಾಂಛೆಯಾಗಿತ್ತು.
ನನ್ನ ಪಕ್ಕದ ಪ್ಲಾಟಿನ ಮಂಗಳಾ ಅದೇ ಊರಿನವಳಾಗಿದ್ದು, ನಮ್ಮೂರಿಗೊಮ್ಮೆ ಬಾರೇ ಅಂದಾಗ, ಅವಳ ಪ್ರೀತಿಯ ಆಹ್ವಾನಕ್ಕೂ, ಹಾಳು ಹಂಪಿಯನ್ನೊಮ್ಮೆ ನೋಡಬೇಕೆಂಬ ತುಡಿತಕ್ಕೂ ಓಗೊಟ್ಟಿದ್ದೆ. ಇತರ ಮೂರು ಗೆಳತಿಯರನ್ನು ಕಲೆಹಾಕಿ ಹಂಪಿಯತ್ತ ಹೊರಟಿದ್ದೆವು ನಾವೈರು ಸ್ನೇಹಿತೆಯರು!

ಸುಮಾರು 30 ಚದರ ಮೈಲುಗಳನ್ನು ಆವರಿಸಿಕೊಂಡಿದೆ ಯುನೆಸ್ಕೋದಿಂದ ವಿಶ್ವಪರಂಪರೆಯ ಮಾನ್ಯತೆ ಪಡೆದಿರುವ ಹಾಳು ಹಂಪೆ. ವಿಜಯನಗರ ಸಮ್ರಾಜ್ಯದ ವೈಭವದ ಕುರುಹಾಗಿದದ್ದು, ವೈರಿಗಳ ಆಕ್ರಮಣದ ಬಳಿಕ, ಕಾಲನ ಆಕ್ರಮಣ, ಕ್ರಮೇಣ ಪ್ರವಾಸಿಗರ ಆಕ್ರಮಣಕ್ಕೆ ತುತ್ತಾಗಿ ತನ್ನ ವೈಭವವನ್ನು ಕಳೆದು ಕೊಂಡಿದೆ. ಆದರೂ, ಹಂಪಿಯಲ್ಲಿ ಅಳಿದುಳಿದಿರುವ ಸ್ಮಾರಕಗಳನ್ನು ಕಂಡು ಮೂಗಿನ ಮೇಲೆ ಬೆರಳೇರಿಸಲು ಮರೆತೇ ಹೋಗುವಷ್ಟು ಬೆರಗಾಗಿ ಹೋಗಿದ್ದೆ ನಾನು.

ಹದಿನಾರನೆ ಶತಮಾನದ ಮಧ್ಯದ ವೇಳೆಗೆ ರಕ್ಕಸತಂಗಡಿ ಯುದ್ಧದಲ್ಲಿ ಶತ್ರುಗಳ ಆಕ್ರಮಣದ ವೇಳೆ ವಿಜಯನಗರ ಸಾಮ್ರಾಜ್ಯದ ಈ ವೈಭವೋಪೇತ ಹಂಪಿಯನ್ನು ನಾಶಪಡಿಸಲಾಯಿತು. ಹಂಪಿಯಲ್ಲಿದ್ದ, ಅರಮನೆಗಳು, ಕೋಟೆಕೊತ್ತಲಗಳು, ಗುಡಿಗೋಪುರಗಳನ್ನು ಕೆಡವಿಹಾಕಲು ಶತ್ರುಗಳಿಗೆ ಆರು ತಿಂಗಳು ಬೇಕಾಯಿತೆಂಬ ಅಂಶವನ್ನು ಊಹಿಸಿಕೊಂಡರೆನೇ ಅದರ ಪರಿಣಾಮ ಎಂಥದಿದ್ದಿರಬಹುದು ಎಂಬುದರ ಅರಿವಾಗಬಹುದು.

ಹಾಳುಬಿದ್ದಿರುವ ಹಂಪೆಯಲ್ಲಿ ಕರ್ನಾಟಕ ಸರಕಾರವು ಪ್ರತಿ ನವೆಂಬರಿನಲ್ಲಿ ಹಂಪಿ ಉತ್ಸವ ನಡೆಸಲಾಗುತ್ತಿದ್ದು, ವಿಜಯನಗರ ಸಾಮ್ರಾಜ್ಯದ ನೆನಹುಗಳ ಪ್ರಯತ್ನಗಳನ್ನು ಮಾಡಲಾಗುತ್ತಿದೆ.ಹಂಪೆಯಲ್ಲಿರುವ ವಿರೂಪಾಕ್ಷ ದೇವಾಲಯ, ಮಹಾನಮಮಿ ದಿಬ್ಬ, ರಾಜಾಂಗಣಗಳು, ಹಿಂದೆ ಅದು ಇದ್ದಿರಬಹುದಾದ ನೈಜತೆಯನ್ನು ಊಹಿಸಿಕೊಳ್ಳಬಹುದಾದಂತಹ ಕಲ್ಪನಾ ಶಕ್ತಿಯನ್ನು ಹೊಂದಿದ್ದರೆ ಸ್ತಂಭೀಭೂತಗೊಳಿಸುತ್ತದೆ.

ವಿದೇಶಿ ಪ್ರವಾಸಿಗ ರಾಬರ್ಟ್ ಸ್ಯೂಯಲ್ ಬರೆದ 'ಫರ್‌ಗಾಟನ್ ಎಂಪಾಯರ್' ಕೃತಿ ಹಂಪೆಯ ವೈಭವವನ್ನು ವಿದೇಶಗಳಲ್ಲಿ ಸಾರಿದೆ. ಇಲ್ಲಿಗೆ ಬರವ ವಿದೇಶಿ ಪ್ರವಾಸಿಗರ ಸಂಖ್ಯೆಯೇ ಅಧಿಕ.ಭಗ್ನಾವಶೇಷಗಳ ನಗರವೆಂದು ಕರೆಸಿಕೊಳ್ಳುವ ಹಂಪಿಗೆ ತರಾತುರಿಯ ಭೇಟಿ ಸಲ್ಲ. ಸುಮೂರು 30 ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿರುವ ಹಂಪಿಯ ಪ್ರತಿಯೊಂದು ಕಲ್ಲಿನ ಹಿಂದೆಯೂ ಒಂದೊಂದು ಚರಿತ್ರೆ ಇದೆ. ತುಂಗಭದ್ರಾ ನದೀ ದಂಡೆಯಲ್ಲಿರುವ ಈ ಹಂಪಿ ಕಲೆ, ವಾಸ್ತುಶಿಲ್ಪದ ಪಾಠ ಹೇಳುತ್ತದೆ.

ಬಳ್ಳಾರಿಯ ಹೊಸಪೇಟೆಯಿಂದ 12 ಕಿಮೀ ದೂರದಲ್ಲಿರುವ ಹಂಪಿಯನ್ನು ಪುರಾಣದ ಕಿಷ್ಕಿಂಧೆ ಎಂದು ಗುರುತಿಸಲಾಗಿದೆ. ರಾಯಮಾಯಣದಲ್ಲಿ ಬರುವ ವಾನರ ಸಾಮ್ರಾಜ್ಯವಿದೆಂದು ಹೇಳಲಾಗುತ್ತಿದೆ. ಇಲ್ಲಿ ವಾನರ ದೇವಾಲಯವೊಂದಿದೆ.ಹಂಪಿಯ ವಿರೂಪಾಕ್ಷ ದೇವಾಲಯ ಪ್ರಮುಖ ಆಕರ್ಷಣೆ. ಈ ಶಿವ ದೇವಸ್ಥಾನ ಹಂಪಿಯ ಬಜಾರಿನಲ್ಲಿ ನೆಲೆಗೊಂಡಿದೆ. ದೇವಾಲಯದ ಪ್ರವೇಶ ದ್ವಾರ 160 ಅಡಿ ಎತ್ತರ ಗೋಪುರವನ್ನು ಹೊಂದಿದೆ.

ವಿರೂಪಾಕ್ಷ ದೇವಾಲಯವಲ್ಲದೆ, ವಿಜಯ ವಿಠಲ, ಹಜಾರ ರಾಮ, ಬಾಲಕೃಷ್ಣ ದೇವಾಲಯಗಳು, ಯೋಗಾನರಸಿಂಹನ ಮೂರ್ತಿ, ಕಲ್ಲಿನ ರಥ, ಹೇಮ ಕೂಟ ದೇವಾಲಯ, ಕಮಲ ಮಹಲ್ ಕಲ್ಲಿನ ರಥ ಆಕರ್ಷಣೀಯ. ಚಲಿಸು ಗಾಲಿಗಳನ್ನು ಹೊಂದಿರುವ ಕಲ್ಲಿನ ರಥವೇ ಒಂದು ದೇವಾಲಯದಂತೆ ತೋರುತ್ತದೆ.ಹಂಪಿಯಲ್ಲಿ ನೋಡಿದಷ್ಟು ಮುಗಿಯದ, ಮತ್ತೆ ಮತ್ತೆ ನೋಡಬೇಕೆನಿಸುವ ಅನೇಕ ಸ್ಥಳಗಳಿವೆ. ಅಕ್ಕ ತಂಗಿ ಗುಡ್ಡ, ಆನೆಗೊಂಡಿ, ಆಂಜನೇಯಾದ್ರಿ ಬೆಟ್ಟ, ಬೋಜನಶಾಲಾ, ಗೆಜ್ಜಾಲ ಮಂಟಪ, ಮಾತುಂಗ ಬೆಟ್ಟ, ಪಂಪಾ ಸರೋವರ, ಸೀತಾ ಕೊಂಡ ಒಂದೇ, ಎರಡೇ- ಹಲವು, ಹಲವಾರು....

ಇಂತಹ ಐತಿಹಾಸಿಕ ಸಿರಿವಂತಿಕೆಯನ್ನು ಬಿಂಬಿಸುವ ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳು ನಡೆದಿಲ್ಲವೆಂದು ವಿಷಾದದಿಂದಲೇ ಹೇಳಬೇಕು. ಆದರೂ ಕೆಲವು ವರ್ಷಗಳ ಹಿಂದೆಗೆ ಹೋಲಿಸಿದರೆ ಈಗ ಅರಿವು ಹುಟ್ಟಿಕೊಂಡಿದ್ದು, ಪರಿಸ್ಥಿತಿ ಸುಧಾರಿಸಿದೆ ಎಂದೇ ಹೇಳಬಹುದು.ಆ ಕಾಲದಲ್ಲಿ ಅದ್ಭುತ ಸೌಂದರ್ಯವನ್ನು ಹೊಂದಿದ್ದ ಈ ನೆಲದಲ್ಲಿ ಕೆಲವು ಅಕ್ರಮಗಳು ಮತ್ತು ಅನೈತಿಕತೆಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡಿದಲ್ಲಿ, ವಿರೂಪಗೊಂಡಿರುವ ಹಂಪೆಯ ಕುರೂಪ ತೊಲಗಬಹುದಲ್ಲವೇ ಎಂದು ನಾವು ನಮ್ಮನಮ್ಮಲ್ಲಿಯೇ ಚರ್ಚಿಸಿಕೊಂಡಿದ್ದೆವು.

ಹಂಪಿಯನ್ನು ನೋಡಿ ನೋಡಿಯೇ ಸುಸ್ತಾಗಿತ್ತು. ತಿರುಗಾಡಿ ಕಾಲು ದಣಿದಿತ್ತು. ತಲೆತುಂಬಿಹೋಗಿತ್ತು. ಅದೊಂದು ಕಾಲದಲ್ಲಿ ಶೋಭಾಯ ಮಾನವಾಗಿ, ಅದ್ಧೂರಿಯ ಅಬ್ಬರ ಮೆರೆದ ಬೀದಿಗಳಲ್ಲಿ, ನಮ್ಮ ಟ್ರಿಪ್ಪಿನ ಕೊನೆಯ ದಿನ ಸಂಜೆಯ ತಂಗಾಳಿಯ ತಂಪಿಗೆ ನನ್ನನ್ನು ಒಡ್ಡಿಕೊಂಡು ಮೌನವಾಗಿ ತಲೆಬಗ್ಗಿಸಿ ಕುಳಿತಿದ್ದೆ. ವಿದಾಯ ಹೇಳಲು ಮನಸ್ಸಿಗಿಷ್ಟವಿರಲಿಲ್ಲ.

ಜತೆಯಲ್ಲಿದ್ದ ಗೆಳತಿಯರು ಸುಸ್ತಾಗಿದ್ದರೂ ಕೀಟಲೆಗೆ ಕಮ್ಮಿಯಿರಲಿಲ್ಲ. ಮುತ್ತು ರತ್ನವೇನಾದರೂ ಸಿಗುತ್ತೆ ಅಂತ ಹುಡುಕುತ್ತಿದ್ದಿಯಾ ಅಂತ ಛೇಡಿಸಿದರು. ನೀನೇನು ಹುಡಿಕಿದರೂ ಸಿಗದು ಬಾ ಮನೆಗೆ ಹೋಗೋಣ ಅಂದಳು ಮಂಗಳಾ. ನೆನಪಿಗೆ ಸಿಕ್ಕಷ್ಟು ಮನದಲ್ಲಿ ಹುದುಗಿಸಿಕೊಂಡು, ತಿರುತಿರುಗಿ ನೋಡುತ್ತಾ, ಮತ್ತೊಮ್ಮೆ ಹಂಪಿಗೆ ಬರುವ ನಿರ್ಧಾರದೊಂದಿಗೆ, ಬಹುಕಾಲದ ಕನಸು ನನಸಾದ ಖುಷಿಯೊಂದಿಗೆ ಮರಳಿದೆವು.

ಚಂದ್ರಾವತಿ ಬಡ್ಡಡ್ಕ

Share this Story:

Follow Webdunia kannada