ಮುಂದೆ ಸಾಗಿದಾಗ, ಹಿಂದಿನ ಕಾಲದಲ್ಲಿ ಹಡಗುಗಳಿಗೆ ಮಾರ್ಗದರ್ಶನ ನೀಡಲು ಬೆಂಕಿಯ ಜ್ವಾಲೆ ಉರಿಸಲಾಗುತ್ತಿದ್ದ, ಎತ್ತರ ಭಾಗದಲ್ಲಿ ಕಲ್ಲಿನಿಂದಲೇ ಕಡೆದ ಮಂಟಪವೊಂದು ಎದುರಾಗುತ್ತದೆ. ಅದನ್ನೇರಿದರೆ ವಿಶಾಲ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶ ಕಾಣಿಸುತ್ತದೆ. ಈಗ ಪಕ್ಕದಲ್ಲಿ ಹೊಸದಾಗಿ ದೀಪಸ್ತಂಭ ನಿರ್ಮಿಸಲಾಗಿದೆ.ಪಲ್ಲವರ ಕಾಲದ ಶಿಲ್ಪಕಲಾ ವೈಭವವನ್ನು ಸಾರುವ ಈ ತಾಣಗಳಿಗೆ ಭೇಟಿ ನೀಡಿ ಹೊರ ಬರುವಾಗ, ಅಲ್ಲಲ್ಲಿ ಕಲ್ಲಿನಿಂದ ಕಡೆದ ಪ್ರತಿಕೃತಿಗಳು ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುತ್ತಾರೆ. ಆದರೆ ಬೆಲೆಯೋ.... ಅಬ್ಬಬ್ಬಾ... ಅನಿಸುತ್ತದೆ. ಯಾಕೆ ಗೊತ್ತೇ? ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದ ಜಾಗ. ಹೆಚ್ಚಾಗಿ ವಿದೇಶೀಯರೇ ಬರುತ್ತಾರೆ.
ಅಲ್ಲಿನವರಿಗೆ ಒಂದು ಪುಟ್ಟ ಕಲ್ಲಿನಿಂದ ಕಡೆದಿರುವ ಆನೆ ಕೇವಲ ಎಂಟ್ಹತ್ತು ಡಾಲರ್‌ನ ವಿಷಯ. ಭಾರತೀಯರಾದ ನಮಗೆ ಇದರ ಬೆಲೆ 400ರಿಂದ 500 ರೂಪಾಯಿ. ಪುಟ್ಟ ಆನೆ ಅಥವಾ ಪೇಪರ್‌ವೈಟ್‌ನಂತೆ ಉಪಯೋಗಿಸಬಲ್ಲ ಕಲ್ಲಿನಿಂದ ಕಡೆದ ವಸ್ತುಗಳು ನೂರು ರೂಪಾಯಿ ಆಸುಪಾಸಿಗೆ ದೊರೆಯುತ್ತದೆ.
ಎಲ್ಲಿ ಹೋದರೂ ವಿದೇಶೀಯರನ್ನು ಕಾಣಬಹುದು... ವಾವ್... ಯಾವ್... ವಾಹ್... ಎಂಬುದೇ ಉದ್ಗಾರಗಳು ಅಲ್ಲಲ್ಲಿ ಕೇಳಿಬರುತ್ತವೆಯೆಂದರೆ ಸಮೀಪದಲ್ಲಿ ವಿದೇಶೀಯರಿದ್ದಾರೆಂದರ್ಥ!.
ಇನ್ನು, ನಮ್ಮದೇ ಪೂರ್ವಜರಾದ ಕೋತಿಗಳು ಕೂಡ ಅಲ್ಲಿ ಸರ್ವೇ ಸಾಮಾನ್ಯವಾಗಿ ಅಡ್ಡಾಡುತ್ತಿರುತ್ತವೆ. ಪ್ರವಾಸಿಗರ ಕೈಯಲ್ಲಿದ್ದದ್ದನ್ನು ಕಿತ್ತುಕೊಳ್ಳಲು ಅವುಗಳಿಗೆ ಯಾವುದೇ ಭಯವಾಗಲೀ, ನಾಚಿಕೆಯಾಗಲೀ ಇಲ್ಲ. ಅವುಗಳು ಕೂಡ ಹಸಿದಿರುತ್ತವೆ, ಬಾಯಾರಿರುತ್ತವೆ. ಹಾಗಾಗಿ ಪ್ರವಾಸಿಗರು ತಂದ ಜ್ಯೂಸ್ ಅಥವಾ ಕೋಲಾ ಬಾಟಲಿಗಳನ್ನು ಕೂಡ ಯಾವುದೇ ಎಗ್ಗಿಲ್ಲದೆ ಎತ್ತಿ ಕುಡಿಯುತ್ತವೆ!
ಸಂಜೆಗತ್ತಲಾಗುತ್ತಿದ್ದಂತೆ ಮರಳಿದಾಗ, ಅಲ್ಲಿ ಅಡ್ಡಾಡುತ್ತಾ ಬೆವರಿದ್ದ ನಮ್ಮನ್ನು ತಂಪು ಮಾಡಲೆಂದು ಮಳೆರಾಯನೂ ಜೋರಾಗಿಯೇ ಇಳೆಗಿಳಿದುಬಿಟ್ಟ. ಚೆನ್ನೈಗೆ ಮರಳಿದಾಗ ಮಳೆಯ ಪತ್ತೆಯೇ ಇಲ್ಲ. ಎಂದಿನ ಸೆಖೆ ಮುಂದುವರಿದಿತ್ತು.