ಮಡೋನಾ, ಅಮಿತಾಭ್ ಬಚ್ಚನ್, ಲಿಝ್ ಹರ್ಲಿ, ಪ್ರಫುಲ್ ಪಟೇಲ್ ಮತ್ತು ವರದರಾಜ ಪೆರುಮಾಳ್ ಇಂಥ ಪ್ರಖ್ಯಾತರ ನಡುವಿನ ಸಾಮಾನ್ಯ ಸಂಗತಿ ಏನು? ಹೌದು. ಇವರೆಲ್ಲರೂ ರಾಜಸ್ಥಾನಕ್ಕೆ ಬಂದಿದ್ದಾರೆ ಮತ್ತು ಜಾಗತಿಕ ಪ್ರವಾಸೋದ್ಯಮ ನಕಾಶೆಯಲ್ಲಿ ರಾಜಸ್ಥಾನಕ್ಕೆ ವಿಶಿಷ್ಟ ಸ್ಥಾನ ದೊರೆಯಲು ಕಾರಣರಾಗಿದ್ದಾರೆ.
ಇಂಥ ಖ್ಯಾತನಾಮರ ಹೆಸರೆಲ್ಲಾ ಒತ್ತಟ್ಟಿಗಿರಲಿ. ಇದೀಗ ಜನಸಾಮಾನ್ಯನಿಗೂ ರಾಜಸ್ಥಾನವು ಅತ್ಯಂತ ನೆಚ್ಚಿನ ಪ್ರವಾಸೋದ್ಯಮ ತಾಣವಾಗಿದೆ. ಇತ್ತೀಚೆಗೆ ಖ್ಯಾತನಾಮರ ವಿವಾಹ ಸಮಾರಂಭವು ಕೂಡ ರಾಜಸ್ಥಾನದಲ್ಲೇ ಮದುವೆಯಾಗುವ ಕುರಿತ ಕ್ರೇಜ್ ಹುಟ್ಟುಹಾಕಿದೆ ಎನ್ನುತ್ತಾರೆ ಪ್ರವಾಸೋದ್ಯಮ ಕ್ಷೇತ್ರದ ಪರಿಣತರು.
ಇಡೀ ಜಗತ್ತು ಹೊಸ ವರ್ಷದ ಹಿಂದಿನ ರಾತ್ರಿಯ ಸಂಭ್ರಮದ ಕಡಲಲ್ಲಿ ಮುಳುಗಿದ್ದರೆ, ವಿಶ್ವವಿಖ್ಯಾತ ಪಾಪ್ ತಾರೆ, ನಟಿ ಮಡೋನಾ ತನ್ನ ಕೌಟುಂಬಿಕ ಮಿತ್ರರು ಮತ್ತಿಬ್ಬರು ಮಕ್ಕಳೊಂದಿಗೆ ರಜಾದಿನಗಳನ್ನು ಕಳೆಯಲೆಂದು ಬಂದಿದ್ದು ರಾಜಸ್ಥಾನಕ್ಕೆ.
ಈ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಮಡೋನಾ ರಾಜಸ್ಥಾನವನ್ನು ಸುತ್ತಿ ಸುಳಿದಿದ್ದಾರೆ ಮತ್ತು ಸಣ್ಣ ಪುಟ್ಟ ಗ್ರಾಮೀಣ ಪ್ರದೇಶಗಳನ್ನು ನೋಡಿ ಆನಂದಪಟ್ಟಿದ್ದಾರೆ ಎಂದು ಜೋಧ್ಪುರ ಮೂಲದ ಟ್ರಾವೆಲ್ ಏಜೆಂಟ್ ಒಬ್ಬರು ನೆನಪಿಸಿಕೊಳ್ಳುತ್ತಾರೆ.
ಇದುವರೆಗೆ ತೀರಾ ನಿರ್ಲಕ್ಷಿತವಾಗಿದ್ದ ಹಳ್ಳಿಗಳಿಗೆ ಈ ಖ್ಯಾತನಾಮರು ಭೇಟಿ ನೀಡಿ, ಈ ಗ್ರಾಮಗಳೂ ಪ್ರವಾಸೀ ನಕಾಶೆಯಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದು ಸುಳ್ಳಲ್ಲ. ಜೋಧ್ಪುರದಲ್ಲಿ ಈ ಹಿಂದೆ ಯಾರಿಗೂ ಗೊತ್ತಿಲ್ಲದ ಪಟ್ಟಣಗಳು ಕೂಡ ಇದೀಗ ಮಡೋನಾ ಭೇಟಿ ನೀಡಿದ ನಂತರ ಜಗತ್ತಿಗೇ ತಿಳಿದಂತಾಗಿದ್ದು, ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ ಎಂಬುದು ಸ್ಥಳೀಯ ಹೋಟೆಲ್ ಮಾಲೀಕರೊಬ್ಬರ ಅಭಿಮತ.
ಮಡೋನಾ ಕಾರ್ಯಕ್ರಮಗಳನ್ನು ಎಷ್ಟೊಂದು ರಹಸ್ಯವಾಗಿರಿಸಲಾಗಿತ್ತೆಂದರೆ, ಕೆಲವೊಮ್ಮೆ ಸ್ಥಳೀಯ ಪೊಲೀಸರಿಗೂ ಕೂಡ ಆಕೆ ಯಾವಾಗ ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ ಎಂಬುದನ್ನು ಜೋಧ್ಪುರ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಹೇಳಿದ್ದಾರೆ.
ನಂತರ, ಫೆಬ್ರವರಿ ತಿಂಗಳಲ್ಲಿ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ ಮಿತ್ರ ಅಮರ್ ಸಿಂಗ್, ಪತ್ನಿ ಜಯಾ ಬಚ್ಚನ್ ಹಾಗೂ ಸೊಸೆ ಐಶ್ವರ್ಯಾ ರೈ ಬಚ್ಚನ್ ಜತೆಗೆ ಇಲ್ಲಿಗಾಗಮಿಸಿ ಸುದ್ದಿ ಮಾಡಿದ್ದರು.
ಒಟ್ಟಿನಲ್ಲಿ ರಾಜಸ್ಥಾನವು ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದೆ.