ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ
, ಸೋಮವಾರ, 9 ಜನವರಿ 2012 (16:30 IST)
ಚಾರಣ ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿ ಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮತ್ತು ರಾತ್ರಿ ವೇಳೆಯಲ್ಲಿ ತಂಗುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ಯ, ನಾಯಕತ್ವ, ಸಂಘ ಶಕ್ತಿ, ಸೂಕ್ತ ಯೋಜನೆ, ಮನೋಲ್ಲಾಸ ಹೆಚ್ಚುಸುವಲ್ಲಿ ಸಹಕಾರಿಯಾಗುತ್ತದೆ.ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ತಯಾರಿ ಮಾಡುವುದು ಅತೀ ಮುಖ್ಯ. ಮೊದಲು ಆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ, ನಂತರ ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಿಕೊಳ್ಳಬೇಕು. ಮುಖ್ಯವಾಗಿ ಚಾರಣದ ಹಾದಿಯಲ್ಲಿ ನೀರಿನ ಲಭ್ಯತೆಯನ್ನು ಮೊದಲೆ ತಿಳಿದುಕೊಳ್ಳಬೇಕು. ಚಾರಣದ ವೇಳೆಯಲ್ಲಿ ಚಾರಣಿಗರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ತಮ್ಮ ಜೊತೆ ಕೊಂಡೊಯ್ಯಬೇಕು ಮತ್ತು ಮಲಗಲು ಬೇಕಾದ ಸರಂಜಾಮುಗಳನ್ನು ಕೂಡ ಕೊಂಡೊಯ್ಯಬೇಕು. ಹೀಗೆ ಪ್ರತಿಯೊಂದು ಯೋಜನೆಗಳನ್ನು ಚೆನ್ನಾಗಿ ಆಲೋಚಿಸಿ ಮಾಡಬೇಕು. ಅದೇ ರೀತಿ ಚಾರಣಕ್ಕೆ ನಮಗೆ ಗೊತ್ತಿರುವ ಪ್ರದೇಶವಾದರೆ ಇನ್ನೂ ಉತ್ತಮ. ನಮ್ಮ ರಾಜ್ಯದಲ್ಲಿಯೇ ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ , ಚಾರಣ ನಡೆಸಲು ಯೋಗ್ಯವಾದ ಸುಂದರ ತಾಣಗಳಿವೆ. ಇಂತಹ ಸುಂದರ ಚಾರಣ ಪ್ರದೇಶವೇ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕುಮಾರಪರ್ವತ. ಒಂದೆಡೆ ಹಸಿರು ಸೀರೆಯುಟ್ಟ ಪ್ರಕೃತಿ ಮಡಿಲಾದರೆ, ಇನ್ನೊ೦ದೆಡೆ ಮುಳಿ ಹುಲ್ಲಿನಿಂದ ನುಣುಪಾಗಿರುವಂತೆ ತೋರುವ ಎತ್ತರ ಶಿಖರ ಭಾಗ. ಮತ್ತೊಂದೆಡೆ ಕಪ್ಪು ಬ೦ಡೆಗಳ ಕಡಿದಾದ ರುದ್ರ ರಮಣೀಯ ದೃಶ್ಯ. ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಹಿಂಬಾಗಿಲಿನ ಈ ಪರ್ವತ, ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸುಂದರ ಪ್ರಕೃತಿಯ ಜೊತೆಗೆ ಜಂಘಾಬಲಕ್ಕೆ ಸವಾಲೊಡ್ಡುವ ರಮಣೀಯ ತಾಣ. ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಏರಬೇಕಾದರೆ 12 ಕಿ.ಮೀ. ನಡೆದೇ ಸಾಗಬೇಕು. ಚಾರಣ ಪ್ರಾರಂಭಿಸಿ ಸುಮಾರು 3 ಕಿ.ಮೀ. ಸಾಗಿದರೆ ಭೀಮನ ಕಲ್ಲು, 5 ಕಿ.ಮೀ. ನಡೆದರೆ ಗಿರಿಗದ್ದೆ, 8 ಕಿ.ಮೀ. ದೂರದಲ್ಲಿ ಕಲ್ಲು ಚಪ್ಪರ, 10 ಕಿ.ಮೀ. ಕ್ರಮಿಸಿದರೆ ಭತ್ತದರಾಶಿ ಮುಂದೆ ದೂರದಿಂದ ಕುಮಾರಪರ್ವತ ಎಂದು ಜನ ಗುರುತಿಸುವ ಶೇಷಪರ್ವತ. ಅದನ್ನು ದಾಟಿದರೆ ಸಿಕ್ಕುವುದು ಅದಕ್ಕಿಂತ ಎತ್ತರದ ಕುಮಾರ ಪರ್ವತ. ಇದರ ಎತ್ತರ ಸಮುದ್ರ ಮಟ್ಟದಿಂದ ಸುಮಾರು 5,615 ಅಡಿ.ಮನೋಹರ್.ವಿ.ಶೆಟ್ಟಿ ಹೆಬ್ರಿ
ಚಾರಣಿಗರಿಗೆ ಸಿಗುವ ತಾಣ: ಸುಬ್ರಹ್ಮಣ್ಯದಿಂದ ಚಾರಣಕ್ಕೆ ಹೊರಟವರಿಗೆ ಮೊದಲು ಸಿಕ್ಕುವ ನೀರಿನ ತಾಣ ಭೀಮನ ಕಲ್ಲು. ಈ ಬ೦ಡೆಯ ಗಾತ್ರ ನೋಡಿಯೇ ಇದಕ್ಕೆ ಭೀಮನ ಕಲ್ಲು ಎಂದಿರಬೇಕು. ಇಲ್ಲಿಂದ ಮುಂದೆ ಸಾಗಿದರೆ ಸಿಗುವ ಕಲ್ಲುಗುಡ್ಡೆ ಏರಲು ಸ್ವಲ್ಪ ಕಷ್ಟಸಾಧ್ಯ. ಬಹುಪಾಲು ದಟ್ಟಾರಣ್ಯ ಇಲ್ಲಿಗೆ ಕೊನೆಯಾಗುತ್ತದೆ. ಮುಂದೆಲ್ಲಾ ಕಣಿವೆ ಪ್ರದೇಶದಲ್ಲಿ ಕುರುಚಲು ಅರಣ್ಯ. ಅದಕ್ಕಿಂತ ಮುಂದೆ ಸಾಗಿದರೆ ಸಿಗುವುದು ಗಿರಿಗದ್ದೆಯ ನಾರಾಯಣ ಭಟ್ಟರ ಮನೆ. ಪೂರ್ವ ಮಾಹಿತಿ ನೀಡಿ ಬರುವ ಚಾರಣಿಗರಿಗೆ ಇಲ್ಲಿ ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಅರಣ್ಯ ಇಲಾಖೆಯಿಂದ ಎರಡು ಕಡೆ ಪ್ರಕೃತಿ ವೀಕ್ಷಣೆಗೆ ವೀಕ್ಷಣಾ ತಾಣ ನಿರ್ಮಿಸಲಾಗಿದೆ. ಸಮೀಪದಲ್ಲಿ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರವೂ ಇದೆ. ಶುಲ್ಕ: ಮುಂದಿನದು ವನ್ಯಪ್ರಾಣಿಗಳ ರಕ್ಷಿತಾರಣ್ಯ. ಆದ್ದರಿಂದ ಇಲಾಖೆಯ ಅನುಮತಿ ಪಡೆದು, ಶುಲ್ಕ ತೆತ್ತು ಮುನ್ನಡೆಯಬೇಕು. ಪ್ರವೇಶ ಶುಲ್ಕ 40 ರೂ., ಚಾರಣ ಶುಲ್ಕ 100 ರೂ., ಕ್ಯಾಮರಾ ಕೊಂಡೊಯ್ಯುವುದಾದರೆ 50 ರೂ. ಇಲಾಖೆ ನೀಡುವ ಮಾರ್ಗದರ್ಶಿಗಳ ಅಗತ್ಯವಿದ್ದರೆ 100 ರೂ. ಪಾವತಿಸಬೇಕು. ಇವುಗಳ ಜೊತೆಗೆ ವಾಹನ ನಿಲುಗಡೆ ಶುಲ್ಕ 40 ರೂ.