ಪುಷ್ಪಗಿರಿಯ ಜಲಕನ್ಯೆ ಮಲ್ಲಳ್ಳಿ ಫಾಲ್ಸ್
ಬಿ.ಎಂ.ಲವಕುಮಾರ್ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎನ್ನುವಂತೆ ನಿಂತ ಬೆಟ್ಟಶ್ರೇಣಿಗಳು... ಅವುಗಳ ನಡುವಿನ ಕಂದಕದಲ್ಲಿ ಒತ್ತೌತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು... ಏಲಕ್ಕಿ, ಕಾಫಿ ತೋಟಗಳು... ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡವನ್ನೊದ್ದ ನಿಸರ್ಗ... ಇಂತಹ ಒಂದು ದಟ್ಟಕಾನನದ ನಡುವಿನ ಸುಂದರ ಪರಿಸರದೊಳಗೆ ಹೆಬ್ಬಂಡೆಯ ಮೇಲೆ ಬೆಳ್ಳಿ ಬಳುಕಿದಂತೆ ಗೋಚರಿಸುತ್ತದೆ ಮಲ್ಲಳ್ಳಿ ಜಲಕನ್ಯೆ.ಹೌದು! ಮಲ್ಲಳ್ಳಿ ಜಲಧಾರೆ ನೆಲೆ ನಿಂತ ಪರಿಸರವೇ ಹಾಗಿದೆ. ಇವತ್ತು ಕೊಡಗಿನಲ್ಲಿರುವ ಜಲಧಾರೆಗಳಿಗೆ ಹೋಲಿಸಿದರೆ ಇದು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ಗಮನಸೆಳೆಯುತ್ತದೆ. ಕೊಡಗಿನಲ್ಲಿರುವ ಬೆಟ್ಟಗಳಲ್ಲೊಂದಾದ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರಪರ್ವತದ ನಡುವೆ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿರುವ ಈ ಜಲಧಾರೆಯತ್ತ ತೆರಳುವ ವೀಕ್ಷಕರ ಸಂಖ್ಯೆ ಕಡಿಮೆಯಾದರೂ ಶ್ರಮವಹಿಸಿ ತೆರಳಿದವರನ್ನು ಜಲಧಾರೆಯ ರುದ್ರನರ್ತನ ರೋಮಾಂಚನಗೊಳಿಸುತ್ತದೆ.
ಹಾಗೆ ನೋಡಿದರೆ ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಪೇಟೆ, ಪಟ್ಟಣದಿಂದ ದೂರವಾಗಿ, ಬಸ್, ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ, ದಿನವೊಂದನ್ನು ಮೀಸಲಿಡಬೇಕು. ರಕ್ತಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮಪಡಬೇಕು. ಇದಕ್ಕೆಲ್ಲಾ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ. ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುವ ಜಲರಾಶಿ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ತಳಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದು ಹೆಬ್ಬಂಡೆಗೆ ಚಿಮ್ಮುವಾಗ ಕಾಣಸಿಗುವ ಸುಂದರ ದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲಾ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.