ನಿಸರ್ಗ ರಮಣೀಯ ಮಡಿಕೇರಿಯ ರಾಜಾಸೀಟ್ ನೋಡಬನ್ನಿ ...
ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ಯೋಗ್ಯ ತಾಣವಾಗಿದೆ. ಹಾಗಾಗಿ ಕೊಡಗು ಎಂದಾಕ್ಷಣ ಪ್ರವಾಸಿಗನ ಮನದಲ್ಲಿ ರಾಜಾಸೀಟಿನ ಚಿತ್ರ ಮೂಡುತ್ತದೆ. ಮುಂಜಾನೆ, ಸಂಜೆ ಮಾತ್ರವಲ್ಲ ಮಟಮಟ ಮಧ್ಯಾಹ್ನದಲ್ಲಿಯೂ ಇಲ್ಲಿ ತಂಗಾಳಿ ಬೀಸುತ್ತಿರುತ್ತದೆ. ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗಿರುವ ಈ ಉದ್ಯಾನದಿಂದ ಇಣುಕಿ ನೋಡಿದರೆ ಒಂದೆಡೆ ಮೈಜುಮ್ಮೆನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ.ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿಶಿಖರಗಳು... ಅವುಗಳ ನಡುವಿನ ಇಳಿಜಾರಿನಲ್ಲಿ ಬೆಳೆದು ನಿಂತಹೆಮ್ಮರಗಳು... ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು... ಕೆಳಗಿನ ಕಂದಕದ ಅಂಕುಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು... ಪಕ್ಕದ ಗುಡ್ಡದಲ್ಲಿ ಒತ್ತೊತ್ತಾಗಿ ಎದ್ದು ನಿಂತ ಜನವಸತಿಗಳು... ಹೀಗೆ ಒಂದೆರಡಲ್ಲ ಹತ್ತಾರು ಸುಂದರ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಮುಂಜಾನೆಯಲ್ಲಿ ಸದಾ ಮಡಿಕೇರಿಗೆ ಮುತ್ತಿಕ್ಕುವ ಮಂಜಿಗೆ ರಾಜಾಸೀಟು ಸುಂದರ ದೃಶ್ಯ ಬರೆಯುವ ಕ್ಯಾನ್ವಾಸ್. ಗುಡ್ಡದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರ ಮರಗಳ ಮೇಲೆಲ್ಲಾ ಬೆಳ್ಳಿಯಂತೆ ಸುರಿದು ಕಂದಕಗಳನ್ನೆಲ್ಲಾ ತುಂಬಿ ಮಂಜಿನ ಸಾಗರ ಸೃಷ್ಟಿಸಿ ನೋಡುಗರನ್ನು ತಬ್ಬಿಬ್ಬುಗೊಳಿಸುವ... ಆ ಗುಡ್ಡ ಈ ಗುಡ್ಡ ಮಧ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ಲಾಗ ಹೊಡೆಯುವ ಮಂಜಿನ ಮಂಗನಾಟಕ್ಕೆ... ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿಬರುವ ವಾಹನಗಳ ಮಂದ ದೀಪಗಳ ಹೊಸ ಅನುಭವಕ್ಕೆ ರಾಜಾಸೀಟು ಸಾಕ್ಷಿಯಾಗುತ್ತದೆ.