ಕರ್ನಾಟಕದ ಬಿಜಾಪುರ ಅಥವಾ ವಿಜಾಪುರ ಪುರಾತನ ವಿಜಯಪುರ.
ಆದಿಲ್ ಶಾಹಿಗಳ ಆಡಳಿತ ಕಾಲದಲ್ಲಿ ಇದು ಅವರ ರಾಜಧಾನಿಯಾಗಿತ್ತು. ಈ ಬಿಜಾಪುರ ಹಲವಾರು ಅದ್ಭುತಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಇತಿಹಾಸ ಪ್ರೇಮಿಗಳನ್ನು ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಬಿಜಾಪುರಕ್ಕೆ ತೆರಳುವಾಗ ಒಂದಷ್ಟು ಹೆಚ್ಚೇ ಸಮಯವನ್ನು ಕಿಸೆಯಲ್ಲಿರಿಸಿಕೊಂಡರೆ ಅದರ ಸಂಪೂರ್ಣ ಸೌಂದರ್ಯವನ್ನು ನೋಡಬಹುದು. ಬೇಸಗೆಯಲ್ಲಿ ತೆರಳುವವರಾದರೆ ಬಿರು ಬಿಸಿಲಿನ ತಾಪವನ್ನು ಸಹಿಸಿಕೊಳ್ಳುವ ಸಹನೆ ನಿಮಗಿರಲಿ. ಹಾಗೆಯೇ ಮಳೆ ಸುರಿಯುವ ವೇಳೆಯಾಗಿದ್ದರೆ ಮಳೆ ಎಬ್ಬಿಸುವ ಕೊಚ್ಚೆ ರಾಡಿಯನ್ನೂ ಸಹಿಸಿಕೊಳ್ಳಬೇಕು.
ಬಿಜಾಪುರ ಅಂದರೆ ಗೋಲಗುಂಬಜ್ ಅಥವಾ ಗೋಲಗುಮ್ಮಟ. ಗೋಲಗುಂಬಜ್ ಅಂದರೆ ಬಿಜಾಪುರ. ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿರುವ ಈ ವಿಸ್ಮಯವನ್ನು ಮಹ್ಮದ್ ಆದಿಲ್ ಶಾ ಕಟ್ಟಿಸಿರುವುದಾಗಿ ಇತಿಹಾಸದಲ್ಲಿ ನಮೂದಾಗಿದೆ.
ಗೋಲಗುಂಬಜ್ನ ವೈಶಿಷ್ಠ್ಯ ಎಂದರೆ, ಗುಮ್ಮಟದ ಒಳಗಿರುವ ವೃತ್ತಾಕಾರದ ಗ್ಯಾಲರಿಯಲ್ಲಿ ನಿಂತು ಒಂದು ಬಾರಿ ಕೂಗಿದರೆ ಅದು ಏಳು ಬಾರಿ ಪ್ರತಿ ಧ್ವನಿಸುತ್ತದೆ. ಇದು ಗುಮ್ಮಟದ ಅಚ್ಚರಿ, ವಿಸ್ಮಯ ಮತ್ತು ಆಕರ್ಷಣೆ.
ಇದಲ್ಲದೆ, ಇದರಲ್ಲಿನ ಪಿಸುಗುಟ್ಟುವ ಜಗುಲಿಯಲ್ಲಿ ನಿಂತು ಪಿಸುಗುಟ್ಟಿದರೆ, 37 ಮೀಟರುಗಳ ದೂರದ ಇನ್ನೊಂದು ಬದಿಯಲ್ಲಿ ಸ್ಪಷ್ಟವಾಗಿ ಕೇಳುತ್ತದೆ. 17ನೆ ಶತಮಾನದ ಈ ಸ್ಮಾರಕ ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ಡುತ್ತಿದೆ.
1627-1657ರ ಕಾಲ ಆದಿಲ್ ಶಾ ಆಳ್ವಿಕೆಯ ಕಾಲವಾಗಿತ್ತು. ಈತ ತನ್ನ ಗೋರಿ ಎಂದು ಕಟ್ಟಿಸಿದ ಇದು ವಿಶ್ವದಲ್ಲಿ ಎರಡನೆ ಅತಿ ದೊಡ್ಡ ಗುಮ್ಮಟವನ್ನು ಹೊಂದಿದೆ. ಗುಮ್ಮಟ 39 ಮೀಟರ್ ವ್ಯಾಸ ಹೊಂದಿದೆ. ರೋಮ್ನಲ್ಲಿರುವ ಸಂತ ಪೀಟರ್ ಬಾಸಿಲಿಕಾಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಗೋಲಗುಂಬಜ್ ಅಲ್ಲದೆ, ಬಿಜಾಪುರದಲ್ಲಿ ನೋಡಲು ಇನ್ನೂ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ಅವುಗಳಲ್ಲಿ ಮುಖ್ಯವಾದದು ಇಬ್ರಾಹಿಂ ರೋಜಾ, ಹನ್ನೆರಡು ಕಮಾನುಗಳ ಬಾರಕಮಾನ್, ಜೋಡ್ ಗುಮ್ಮಟ, ಬುರುಜುಗಳು, ಕೊತ್ತಲಗಳು ಸೇರಿದಂತೆ ಇನ್ನಷ್ಟು ಚಾರಿತ್ರಿಕ ಸ್ಥಳಗಳಿವೆ.
ಚಂದ್ರಾವತಿ ಬಡ್ಡಡ್ಕ