Select Your Language

Notifications

webdunia
webdunia
webdunia
webdunia

ಈ ರಸ್ತೆಯಲ್ಲಿ ಪ್ರಯಾಣಿಸಲು ಎರಡು ಗುಂಡಿಗೆ ಬೇಕು ಗೊತ್ತಾ...!

ಈ ರಸ್ತೆಯಲ್ಲಿ ಪ್ರಯಾಣಿಸಲು ಎರಡು ಗುಂಡಿಗೆ ಬೇಕು ಗೊತ್ತಾ...!

ಗುರುಮೂರ್ತಿ

ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2018 (17:44 IST)
ಕೆಲವರಿಗೆ ರಸ್ತೆ ಪ್ರಯಾಣದ ಗೀಳು ಇರುತ್ತದೆ. ರಜೆ ಸಿಕ್ಕರೆ ಸಾಕು ಬೈಕನ್ನು ಏರಿ ಇಲ್ಲವೇ ಕಾರನ್ನು ಏರಿ ಊರಿಂದೂರಿಗೆ ಸುತ್ತುವ ಹವ್ಯಾಸವಿರುತ್ತದೆ. ಇನ್ನು ಕೆಲವರು ಸ್ವಲ್ಪ ವಿಭಿನ್ನ, ಅವರಿಗೆ ರೈಡಿಂಗ್ ಅಂದರೆ ಇಷ್ಟವೇ ಅದರಲ್ಲೂ ಸ್ವಲ್ಪ ಥ್ರೀಲ್ ಆಗಿರುವ ರಸ್ತೆಯಲ್ಲಿ ಚಲಾಯಿಸುವುದು ಅಂದರೆ ತುಂಬಾ ಇಷ್ಟ. ಹೌದು ಪ್ರತಿಹಾದಿಯಲ್ಲೂ ಕಿಕ್ ಬೇಕು ಎನ್ನುವ ರೈಡರ್‌ಗಳಿಗೆ ಈ ರಸ್ತೆಗಳು ಸಕತ್ ಕಿಕ್ ಕೊಡುತ್ತವೆ ಅಂತಹ ರಸ್ತೆಗಳು ಎಲ್ಲಿವೆ ಅನ್ನೋ ಕೂತುಹಲ ನಿಮಗಿದ್ರೆ ಈ ವರದಿಯನ್ನು ಓದಿ...
 
ಈ ರಸ್ತೆಗಳಲ್ಲಿ ಪ್ರಯಾಣಿಸಬೇಕು ಎಂದರೆ ನೀವು ಉತ್ತಮ ರೈಡರ್ ಆಗಿದ್ದರಷ್ಟೇ ಸಾಲದು, ಎರಡು ಗುಂಡಿಗೆಯನ್ನು ಹೊಂದಿರಬೇಕು. ಈ ರಸ್ತೆಯು ಪೃಕೃತಿಯ ಮಧ್ಯೆ ಸುಂದರವಾಗಿ ಕಂಡರು ತುಂಬಾ ಅಪಾಯಕಾರಿ. ಈ ರಸ್ತೆಗಳಲ್ಲಿ ನೀವು ಪ್ರಯಾಣಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವುದು ಗ್ಯಾರಂಟಿ. ಅಲ್ಲದೇ ಈ ರಸ್ತೆಗಳಲ್ಲಿ ಪ್ರಯಾಣಿಸುವ ಪ್ರತಿ ಹಂತದಲ್ಲಿಯೂ ನೀವು ಹೊಸತನವನ್ನು ಕಾಣಬಹುದು, ಆದರೆ ತುಸು ಜಾಗರೂಕತೆ ವಹಿಸಬೇಕಷ್ಟೇ. ಅದಲ್ಲದೇ ಇಲ್ಲಿನ ಪ್ರತಿ ಅನುಭವವು ನಿಮ್ಮ ಜೀವನದ ಒಂದು ಅವಿಸ್ಮರಣೀಯ ನೆನಪಾಗಿರುವುದರಲ್ಲಿ ಡೌಟೇ ಇಲ್ಲ.
 
ಲೇಹ್-ಮನಾಲಿ ಹೈವೇ...
ಇದು ದೇಶದ ಅತ್ಯಂತ ಸುಂದರವಾದ ಹೈವೇಗಳಲ್ಲಿ ಒಂದಾಗಿದ್ದು ಈ ಹೈವೇ ಅಲ್ಲಿ ಪ್ರಯಾಣಿಸುವಾಗ ನಾವು ಸುಂದರ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ರಸ್ತೆ ಪ್ರಕೃತಿ ಸೌಂದರ್ಯವನ್ನು ಹೊಂದಿರುವುದಷ್ಟೇ ಅಲ್ಲ ತುಂಬಾ ಅಪಾಯಕಾರಿಯೂ ಆಗಿದೆ. ಲೇಹ್-ಮನಾಲಿ ನಡುವೆ 490 ಕಿಮೀ ದೂರವಿದ್ದು, ಈ ರಸ್ತೆಯು ಹಿಮಾಚಲ್ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ನಡುವೆ ಈ ರಸ್ತೆ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಆಗಾಗೆ ಹವಾಮಾನ ವೈಪರಿತ್ಯದಿಂದ ಅಪಘಾತಗಳು ಸಂಭಿಸುತ್ತವೆ ಆದ್ದರಿಂದ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಆದಷ್ಟು ಹೆಚ್ಚಿನ ಕಾಳಜಿ ವಹಿಸುವುದಷ್ಟೇ ಅಲ್ಲ, ತುರ್ತುಪರಿಸ್ಥಿತಿಯಲ್ಲಿ ಬೇಕಾಗುವ ಪರಿಕರಗಳನ್ನು ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅಲ್ಲದೇ ಈ ಪ್ರದೇಶದಲ್ಲಿ ಪ್ರಾಯಾಣಿಸುವಾಗ ಹೆಚ್ಚುವರಿ ಇಂಧನವನ್ನು ಒಯ್ಯುವುದು ಸೂಕ್ತ. ಈ ರಸ್ತೆಯ ಪ್ರಯಾಣ ತುಂಬಾ ರೋಮಾಂಚನಕಾರಿಯಾಗಿದ್ದು ರೈಡರ್‌ಗೆ ಸಕತ್ ಕಿಕ್ ಕೊಡುತ್ತದೆ.
 
ಝೋಜಿ ಲಾ ಪಾಸ್ ಸ್ಟ್ರೆಚ್
webdunia
ಸಮುದ್ರ ಮಟ್ಟದಿಂದ 11575 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಪ್ರಯಾಣಿಸುವುದೆಂದರೆ ಮಕ್ಕಳ ಆಟವಲ್ಲ, ಈ ರಸ್ತೆಯು ಕಲ್ಲು ಮಣ್ಣುಗಳಿಂದ ಕೂಡಿದ್ದು ಹೇರ್‌ಪಿನ್ ಬೆಂಡಿನ ತಿರುವುಗಳನ್ನು ಹೊಂದಿದೆ. ಕಣಿವೆಗಳ ಅಂಚಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಪ್ರಯಾಣಿಸುವ ಎಂತಹವರಿಗಾದರೂ ಜೀವವನ್ನು ಕೈಯಲ್ಲಿ ಹಿಡಿದ ಅನುಭವವಾಗುತ್ತದೆ. ಎತ್ತರವಾದ ಪರ್ವತ ಶಿಖರಗಳು, ಅಲ್ಲಲ್ಲಿ ಕಾಣುವ ಹಿಮಚ್ಛಾದಿತ ಪ್ರದೇಶ, ಪಯಣಿಸುತ್ತಾ ಹೋದಂತೆ ಕಾಣುವ ಪರ್ವತದ ಸುತ್ತಲಿನ ಕಣಿವೆಯ ಕಲ್ಲಿನ ಬೆಟ್ಟಗಳ ತುದಿಯಲ್ಲಿರುವ ರಸ್ತೆ, ಅದನ್ನು ನೋಡುವುದೇ ಅತೀ ಭಯಂಕರ. ಅಂತಹ ರಸ್ತೆಯಲ್ಲಿ ನೀವು ವಾಹನವನ್ನು ಚಲಾಯಿಸುವಾಗ ಸ್ವಲ್ಪ ತೊಂದರೆಯಾದರೂ ಸಾವು ಎದುರಾಗುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿ ನೀವು ಪ್ರಯಾಣಿಸುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಚಳಿಗಾಲದ ಅವಧಿಯಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ತುಂಬಾ ಜಾಗರೂಕತೆ ವಹಿಸಬೇಕು ಹಾಗಾಗಿ ನೀವು ಒಂದು ವೇಳೆ ಈ ರಸ್ತೆಯಲ್ಲಿ ಪ್ರಯಾಣಿಸಬೇಕಾದಲ್ಲಿ ಸ್ವಲ್ವ ಹುಶಾರಾಗಿರುವುದು ಒಳಿತು.
 
ಖರ್ದಾಂಗ್ ಲಾ ಪಾಸ್ ಸ್ಟ್ರೆಚ್
webdunia
ಶಿಯೋಕ್ ಮತ್ತು ನುಬ್ರಾ ಕಣಿವೆಯ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ಖರ್ದಾಂಗ್ ಲಾ ಪಾಸ್ ಸ್ಟ್ರೆಚ್ ವಿಶ್ವದಲ್ಲಿಯೇ ಅತೀ ಎತ್ತರದ ರಸ್ತೆಗಳಲ್ಲಿ ಇದು ಕೂಡಾ ಒಂದು. ಕರಕೋರಂ ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ ಹಿಮಗಾಳಿ ಬಿಸುತ್ತಿರುತ್ತದೆ ಹಾಗಾಗಿ ಪರ್ವತದ ಕಣಿವೆಯಲ್ಲಿ ಹಿಮಗಾಳಿ ಮಧ್ಯೆ ಕಂದಕವನ್ನು ನೋಡುತ್ತಾ ಸವಾರಿಯನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ವಾಹನ ಚಲಾಯಿಸಬೇಕು ಎಂದರೆ ಗುಂಡಿಗೆ ತುಂಬಾ ಗಟ್ಟಿ ಇರಬೇಕಾಗುತ್ತದೆ. ಕೊಂಚ ಆಯ ತಪ್ಪಿದರು ಇಲ್ಲಿ ಪ್ರಪಾತಕ್ಕೆ ಬಿಳುವುದು ಗ್ಯಾರಂಟಿ. ಅಷ್ಟೇ ಅಲ್ಲ ಈ ರಸ್ತೆ ಎಷ್ಟು ಭಯಾನಕವೋ ಅಷ್ಟೇ ಸುಂದರವಾಗಿದೆ. ಸುತ್ತಲೂ ಇರುವ ಹಿಮಗಳಿಂದ ತುಂಬಿದ ಬೆಟ್ಟಗಳು ಮುಗಿಲಿನ ಕೆಳಗೆ ಶ್ವೇತವರ್ಣದ ಸೀರೆಯನ್ನುಟ್ಟು ನಿಂತ ಹಾಗೆ ಕಾಣುವ ಗಿರಿ ಶಿಖರಗಳು, ಸವಾರಿ ಮಾಡುವವರಿಗೆ ರೋಮಾಂಚನವನ್ನುಂಟು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ನೀವು ಈ ರಸ್ತೆಯಲ್ಲಿ ಪ್ರಯಾಣಿಸಬೇಕೆಂದರೆ ಅದಕ್ಕೆ ವೇಳೆಯನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ ನೀವು ಹೊರಡುವುದಾದರೆ 9 ರಿಂದ 1 ಗಂಟೆ ಇಲ್ಲವೇ 1 ರಿಂದ 5 ಗಂಟೆ ತದನಂತರ ಈ ಪ್ರದೇಶದಲ್ಲಿ ಹವಾಮಾನ ವೈಪರಿತ್ಯಗಳು ಬದಲಾಗಬಹುದು, ಆದ ಕಾರಣ ಈ ಪ್ರದೇಶದಲ್ಲಿ ಪ್ರಯಾಣ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. ನೀವು ಈ ಪ್ರದೇಶದಲ್ಲಿ ಪ್ರಯಾಣ ಮಾಡಬೇಕು ಅದರ ಸೌಂದರ್ಯವನ್ನು ಸವಿಯಬೇಕು ಎಂದರೆ ಮೇ ತಿಂಗಳಿಂದ ಅಕ್ಟೋಬರ್ ಉತ್ತಮ ಸಮಯ ಎಂದು ಹೇಳಬಹುದು.
 
ರೋಹ್ತಂಗ್ ಪಾಸ್ ಸ್ಟ್ರೆಚ್
webdunia
ಲಾಹೌಲ್-ಸ್ಪಿತಿ ಮತ್ತು ಲೇಹ್‌ ಪ್ರದೇಶದ ಹೆಬ್ಬಾಗಿಲು ಇದಾಗಿದ್ದು, ಉತ್ತರ ಭಾರತದಲ್ಲಿಯೇ ಅಪಾಯದ ರಸ್ತೆಗಳಲ್ಲಿ ಇದು ಪ್ರಮುಖವಾಗಿದೆ ಎಂದೇ ಹೇಳಬಹುದು. ಈ ರಸ್ತೆಯು ಮನಾಲಿಯಿಂದ ಸುಮಾರು 53 ಕಿ.ಮೀ ದೂರದಲ್ಲಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಕಣಿವೆಗಳು, ಸೊಗಸಾದ ಪ್ರಕೃತಿಯ ರಸದೌತಣ ನೀಡುವ ವೀಕ್ಷಣೆಗಳು, ಹಿಮನದಿಗಳು, ಹಿಮಚ್ಛಾದಿತ ಪರ್ವತ ಶ್ರೇಣಿಗಳು ಮತ್ತು ಚಂದ್ರಾ ನದಿಯ ಸೌಂದರ್ಯವನ್ನು ನಾವು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಪ್ರಯಾಣಿಸುವ ರಸ್ತೆಯು ಕಿರಿದಾಗಿದ್ದು ರಸ್ತೆಯ ಎರಡು ಕಡೆ ಹಿಮಗಳಿಂದ ಆವೃತಗೊಂಡಿದೆ ಹಾಗಾಗಿ ಈ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ವಿಶೇಷ ಎಚ್ಚರಿಕೆಯ ಆಗತ್ಯವಿರುತ್ತದೆ. ಅಲ್ಲದೇ ಸಾಮಾನ್ಯವಾಗಿ ಇಲ್ಲಿ ಪ್ರಯಾಣಿಸುವಾಗ ವಾಹನಗಳಿಗೆ ಕೆಲವು ವಿಶೇಷವಾದ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಬೈಕುಗಳಲ್ಲಿ ಪ್ರಯಾಣಿಸುವವರು ಈ ಪ್ರದೇಶದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಇಲ್ಲವಾದಲ್ಲಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.
 
ಕೊಲ್ಲಿ ಹಿಲ್ಸ್
webdunia
ಕೊಲ್ಲಿ ಹಿಲ್ಸ್ ಇದು ತಮಿಳುನಾಡಿನ ನಾಮಕಲ್ ಜಿಲ್ಲೆಯಲ್ಲಿದೆ ಸುತ್ತಲು ಪರ್ವತಗಳನ್ನು ಹೊಂದಿದ್ದು ಇಲ್ಲಿನ ರಸ್ತೆಗಳು ಹೆರ್‌ಪಿನ್ ಬೆಂಡ್ ಮಾದರಿಯಲ್ಲಿ ತಿರುವುಗಳನ್ನು ಹೊಂದಿದೆ. ಈ ರಸ್ತೆಯಲ್ಲಿ ಸವಾರಿ ಮಾಡುವಾಗ 70 ಹೇರ್ ಪಿನ್ ಮಾದರಿಯ ತಿರುವುಗಳು ಕಂಡುಬರುತ್ತದೆ. ಕೊಲ್ಲಿ ಬೆಟ್ಟಗಳಲ್ಲಿನ ಈ ರಸ್ತೆಗಳು ಅತ್ಯಂತ ಅಪಾಯಕಾರಿಯಾದ ತಿರುವುಗಳನ್ನು ಹೊಂದಿದ್ದು ಕೊಂಚ ಆಯ ತಪ್ಪಿದರೂ ಜೀವಕ್ಕೆ ಕುತ್ತುಬರಬಹುದು. ಅಷ್ಟೇ ಅಲ್ಲ ಈ ರಸ್ತೆಯಲ್ಲಿ ಸಾಗುವಾಗ ನಿಮಗೆ ಹಸಿರು ಬೆಟ್ಟಗಳು ಕಣ್ಮನ ಸೆಳೆಯುವ ಅಲ್ಲಲ್ಲಿ ಸಿಗುವ ಜಲಪಾತಗಳು ನಿಮನ್ನು ಮುದಗೊಳಿಸುತ್ತವೆ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಮುನ್ನಚ್ಚರಿಕೆಯು ಅತೀ ಮುಖ್ಯ.
 
 
ಈ ರಸ್ತೆಗಳು ಅಪಾಯಕಾರಿ ಎಂಬ ಖ್ಯಾತಿಯನ್ನು ಪಡೆದಿದ್ದು, ಅಷ್ಟೇ ಸೌಂದರ್ಯದ ಕಣಜವನ್ನು ತನ್ನ ಒಡಲಲ್ಲಿ ಒಚ್ಚಿಟ್ಟುಕೊಂಡಿದೆ. ಇಲ್ಲಿ ಪ್ರತಿವರ್ಷ ಸಾವಿರಾರು ರೈಡರ್‌ಗಳು ಆಗಮಿಸುತ್ತಿದ್ದು ಇದು ರೆಡರ್‌ಗಳ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ ಎಂದೇ ಹೇಳಬಹುದು. ಇವು ಅಡ್ವೆಂಚರ್ ರೈಡರ್‌ಗಳಿಗೆ ಹೇಳಿ ಮಾಡಿಸಿದ ರಸ್ತೆಗಳಾಗಿದ್ದು, ಈ ಪ್ರದೇಶದಲ್ಲಿ ಪ್ರಯಾಣಿಸುವಾಗ ನಿಸರ್ಗದ ಮಧ್ಯೆ ಸಿಗುವ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದರೊಂದಿಗೆ ಸುಂದರ ಪ್ರಯಾಣದ ಸಿಹಿನೆನಪನ್ನು ನೀವು ಪಡೆಯಬಹುದಾಗಿದೆ. ಅಷ್ಟೇ ಅಲ್ಲ ನೀವು ಈ ರಸ್ತೆಗಳಲ್ಲಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು ಮತ್ತು ಚಾಲನೆಯಲ್ಲಿ ಪರಿಣಿತಿಯನ್ನು ಹೊಂದಿರಬೇಕು. ಅಲ್ಲದೇ ಇಲ್ಲಿ ಯಾವ ಸಂದರ್ಭದಲ್ಲಿ ಹವಾಮಾನ ಏರಿಳಿತವಾಗುತ್ತದೆಯೋ ತಿಳಿಯುವುದಿಲ್ಲ ಹಾಗಾಗಿ ಪ್ರಯಾಣಕ್ಕೆ ಬೇಕಾದ ಸಕಲ ರೀತಿಯ ವಸ್ತುಗಳನ್ನು ಮೊದಲೇ ಇಟ್ಟುಕೊಳ್ಳುವುದು ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?