Publish Date: Sat, 22 Nov 2014 (14:01 IST)
Updated Date: Sat, 22 Nov 2014 (14:02 IST)
ದಕ್ಷಿಣದ ಗಂಗೆ ಎಂದು ಕರೆಸಿಕೊಳ್ಳುವ ಕನ್ನಡ ನಾಡಿನ ಜೀವನದಿ ಲಿಕಾವೇರಿಳಿಯ ಉಗಮ ಸ್ಥಳವಿದು. ಮಡಕೇರಿ ತಾಲೋಕು ಭಾಗಮಂಡಲದಿಂದ 8 ಕಿ. ಮೀ ದೂರವಿದೆ. ಕಾಲು ಹಾದಿ ಮೂಲಕ ಈ ಸ್ಥಳಕ್ಕೆ ಹೋಗಬಹುದು. ವಾಹನ ಸೌಕರ್ಯವೂ ಇದೆ. ಪ್ರಕೃತಿ ಪ್ರಿಯರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಒಂದು. ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ, ಬಾನಿನಿಂದ ಭುವಿ ನೋಡಿದ ಅನುಭವ ಆಗುತ್ತದೆ.
ಸ್ಥಳ ಮಹಿಮೆ: ಇಲ್ಲಿ ಅಗಸ್ತ್ಯ ಋುಷಿ ಸ್ಥಾಪಿಸಿದ ಎನ್ನಲಾದ ಅಗಸ್ತ್ಯೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯಗಳಿವೆ. ಇಲ್ಲಿಂದ ಕೂಗಳತೆಯ ತಗ್ಗಿನಲ್ಲಿ ಕಾವೇರಿ ಉದ್ಭವಿಸುವ ಸ್ಥಳವಿದೆ. ಅಲ್ಲಿ ಚಚ್ಚೌಕ ಆಕಾರದ ಒಂದು ಕೊಳ ಅಥವಾ ಕಲ್ಯಾಣಿಯೊಂದನ್ನು ಕಟ್ಟಲಾಗಿದೆ. ಈ ಕೊಳವನ್ನು ಲಿಕುಂಡಿಗೆಳಿ ಎಂದು ಕರೆಯುತ್ತಾರೆ. ಇಲ್ಲಿಂದ ಕಾವೇರಿ ಆರಂಭವಾಗುತ್ತದೆ. ಅದರ ಬಳಿ ಸ್ನಾನಕ್ಕಾಗಿ ವಿಶಾಲವಾದ ಕೊಳವಿದೆ. ತುಲಾ ಸಂಕ್ರಮಣದ ದಿವಸ ಒಂದು ನಿಶ್ಚಿತ ಸಮಯಕ್ಕೆ ಕಾವೇರಿ ಉಕ್ಕಿ ಹರಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ.
ಅಂದು ಜನ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಸ್ನಾನ ಮಾಡಿ ಪಾವನರಾಗುತ್ತಾರೆ. ಈ ಕೋಳದಲ್ಲಿ ಸ್ನಾನ ಮಾಡುವುದೆಂದರೆ, ಗಂಗಾ ಉತ್ತರ ಭಾರತದ ಗಂಗಾ ನದಿಯಲ್ಲಿ ಮಿಂದಷ್ಟೇ ಪವಿತ್ರ ಎಂಬ ಭಾವನೆ ಇದೆ. ಕಾವೇರಿಯು ಬ್ರಹ್ಮಗಿರಿ ಎಂಬ ಬೆಟ್ಟದಲ್ಲಿ ಹುಟ್ಟುತ್ತದೆ. ಇದು ಸುಮಾರು 300 ಅಡಿ ಎತ್ತರದ ಬೆಟ್ಟ. ಸಪ್ತರ್ಷಿಗಳು ಇಲ್ಲಿ ಹೋಮ ಮಾಡಿದ್ದರು ಎಂಬ ಪ್ರತೀತಿ ಇದೆ. ಬೆಟ್ಟದ ಗಿರಿ ಮೇಲೆ ನಿಂತರ ನೀಲಗಿರಿ, ಕುದುರೆಮುಖ, ಕರಾವಳಿ, ಕೆಳಗೆ ಹರಿಯುವ ನದಿಗಳು, ಅರಭಿಸಮುದ್ರ ಎಲ್ಲವೂ ಚೆನ್ನಾಗಿ ಕಾಣುತ್ತವೆ.