ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಶಿವನ ಸಮುದ್ರ ಜಲಪಾತ ಹೆಸರುವಾಸಿಯಾದದ್ದು. ಇದು ಮೈಸೂರಿನಿಂದ ಸುಮಾರು 70ಕಿ.ಮೀ.ದೂರದಲ್ಲಿದೆ. ಕಾವೇರಿ ಇಲ್ಲಿ ಎರಡು ಕವಲಾಗಿ ಒಡೆದು ಎರಡು ಜಲಪಾತಗಳನ್ನು ಸೃಷ್ಟಿಸಿದ್ದಾಳೆ. ಇದರಲ್ಲಿ ಒಂದು ಪಶ್ಚಿಮದಲ್ಲಿ ಧುಮುಕುವ ಕವಲಿಗೆ ಗಗನಚುಕ್ಕಿ ಎಂದೂ ಅಲ್ಲಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಧುಮ್ಮಿಕ್ಕುವ ಪೂರ್ವದ ಕವಲಿಗೆ ಭರಚುಕ್ಕಿ ಎಂದೂ ಕರೆಯುತ್ತಾರೆ. ಅವೆಲ್ಲಕ್ಕಿಂತ ಹೆಚ್ಚಾಗಿ ಶಿವನಸಮುದ್ರ ಜಲಪಾತ ವಿಶ್ವದಲ್ಲೇ ಹದಿನೇಳನೇ ಸ್ಥಾನದಲ್ಲಿರುವುದು ಶ್ಲಾಘನೀಯ ವಿಷಯ.
ನೂರು ಮೀಟರ್ ಎತ್ತರದ ದಿಬ್ಬದ ನೆತ್ತಿಯಿಂದ ಕೆಳಗೆ ಧುಮುಕುವ ಈ ಜಲಧಾರೆಗಳ ಸೌಂದರ್ಯವನ್ನು ನೋಡಿ ಸವಿಯಲು ಸಹಸ್ರಾರು ಜನ ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಬಸ್ ನಿಲ್ದಾಣದಿಂದ ಇಳಿದು ಒಂದು ಕಿ.ಮೀ.ದೂರ ಕ್ರಮಿಸಿದರೆ ಸಾಕು. ಕಡಿದಾದ ಕಣಿವೆ ಸಿಗುತ್ತದೆ. ಕಣಿವೆಯನ್ನು ಸಮೀಪಿಸುತ್ತಿದ್ದಂತೆಯೇ ಗಗನಚುಕ್ಕಿ ಜಲಪಾತಗಳ ರಮ್ಯ ದೃಶ್ಯ ಗೋಚರವಾಗಿ ಕಣ್ಮನಗಳನ್ನು ಸೆಳೆಯುತ್ತದೆ.
ಭರಚುಕ್ಕಿಯನ್ನು ವೀಕ್ಷಿಸಬೇಕಾದರೆ ಹ್ಯಾಂಡ್ ಪೋಸ್ಟ್ ಎಂಬಲ್ಲಿಗೆ ವಾಪಸ್ಸು ಹೋಗಿ ಮತ್ತೆ ಬಳಸಿಕೊಂಡು ನದಿಯ ಆಚೆ ದಂಡೆಗೆ ಬರಬೇಕು. ಇದು ಗಗನಚುಕ್ಕಿಗಿಂತ ವಿಭಿನ್ನ ಶೈಲಿಯಲ್ಲಿ ಧುಮ್ಮಿಕ್ಕುವ ಜಲಧಾರೆಯಾಗಿದೆ.
ಭರಚುಕ್ಕಿಗೆ ಹೋಗುವ ಸಂದರ್ಭದಲ್ಲಿ ನದಿ ದಂಡೆಯ ಮೇಲೆ ಪೀರ್ ಹಜರತ್ ಗಾಯಿಬ್ ದರ್ಗಾ ಹಾಗೂ ಮಸೀದಿ ಸಿಗುತ್ತದೆ. ಇಲ್ಲಿಂದ ಗಗನಚುಕ್ಕಿ ಜಲಪಾತದ ಸೌಂದರ್ಯ ನಯನಮನೋಹರವಾಗಿರುತ್ತದೆ. ನಂತರ ಇಲ್ಲಿಂದ ಭರಚುಕ್ಕಿಗೆ ಹೋಗಲು ಸುಲಭವಾಗುತ್ತದೆ. ದರ್ಗಾ ಕಡೆಯಿಂದ ಜಲಪಾತ ವೀಕ್ಷಣೆಗೆ ಹೊಸದಾಗಿ ವೀಕ್ಷಣ ಗೋಪುರವನ್ನು ನಿರ್ಮಿಸಲಾಗಿದೆ.
ಜುಲೈ-ಆಗಸ್ಟ್ ತಿಂಗಳಲ್ಲಿ ಕಾವೇರಿ ಕಣಿವೆ ಪ್ರದೇಶದಲ್ಲಿ ತುಂಬಾ ಮಳೆಯಾಗುವುದರಿಂದ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳು ಧುಮ್ಮಿಕ್ಕಿ ಹರಿಯುವುದರಿಂದ ಈ ಅವಧಿಯಲ್ಲೇ ಶಿವಸಮುದ್ರ ಭೇಟಿಗೆ ಪ್ರಸಕ್ತವಾದ ಸಮಯ.