Select Your Language

Notifications

webdunia
webdunia
webdunia
webdunia

ಮಹಾಬಲಿಪುರದ ಶಿಲ್ಪಕಲಾವೈಭವ

ಮಹಾಬಲಿಪುರದ ಶಿಲ್ಪಕಲಾವೈಭವ
ಚೆನ್ನೈ , ಶನಿವಾರ, 22 ನವೆಂಬರ್ 2014 (14:04 IST)
ದಕ್ಷಿಣ ಭಾರತದ ಶಿಲ್ಪಕಲಾ ವೈಭವಕ್ಕೆ ತನ್ನದೇ ಆದ ಆಕರ್ಷಣೆಯಿದೆ. ಶಿಲಾಯುಗದ ಕಾಲದಿಂದ ತೊಡಗಿ ಮಾನವನು ಕಲ್ಲಿನ ಮೇಲೆ ತನ್ನ ಕಲಾ ಸಾಮರ್ಥ್ಯವನ್ನು ಪ್ರಚುರಪಡಿಸುತ್ತಲೇ ಬಂದಿದ್ದಾನೆ. ಅಂಥದ್ದೊಂದು ಶಿಲ್ಪ ಕಲೆಗಳ ಬೆರಗಿನ ಬೆಡಗನ್ನು ಪ್ರಚುರಪಡಿಸುವ ಊರು ತಮಿಳುನಾಡಿನ ಮಹಾಬಲಿಪುರಂ.
 
ಚಿಕ್ಕವರಿದ್ದಾಗ ಶಾಲಾ ಪಾಠ ಪುಸ್ತಕಗಳಲ್ಲಿ ಓದಿ ಮತ್ತು ಅಧ್ಯಾಪಕರಿಂದ ಇಲ್ಲಿನ ಶಿಲ್ಪ ಕಲಾ ಸೌಂದರ್ಯದ ಬಗ್ಗೆ ಕೇಳಿ ತಿಳಿದಿದ್ದ ನಮಗೆ ಸಹಜವಾಗಿಯೇ ಇದರ ಬಗ್ಗೆ ಕುತೂಹಲವಿತ್ತು. ಚೆನ್ನೈಯಲ್ಲೇ ಕಳೆದೆರಡು ವರ್ಷಗಳಿಂದ ಠಿಕಾಣಿ ಹೂಡಿದ್ದರೂ ಅತ್ತ ಕಡೆ ತಲೆ ಹಾಕುವುದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಕೊನೆಗೂ ಅದೊಂದು ಭಾನುವಾರ ಇದಕ್ಕೆ ಅವಕಾಶ ದೊರೆಯಿತು.
 
ಚೆನ್ನೈಯಿಂದ ಸುಮಾರು 75 ಕಿ.ಮೀ. ದೂರದಲ್ಲಿದೆ ಈ ತಾಣ. ಬೆಳಿಗ್ಗೆ ಸುಮಾರು 10 ಗಂಟೆಗೆ ಚೆನ್ನೈಯಿಂದ ಹೊರಟು, ಪೂರ್ವ ಕರಾವಳಿಯ ಸಮುದ್ರದಲೆಗಳ ಸೌಂದರ್ಯವನ್ನು ಸವಿಯುತ್ತಾ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದರೆ, ಇಂಥದ್ದೇ ರಸ್ತೆ ಎಲ್ಲೆಡೆ ಇರಬಾರದೇ ಎಂದು ಅನಿಸಿದ್ದಂತೂ ಸಹಜ. ಇಕ್ಕೆಲಗಳಲ್ಲೂ ಎಂಜಿಎಂ, ಗೋಲ್ಡನ್ ಬೀಚ್, ಸಿಲ್ವರ್ ಬೀಚ್ ಎಂಬುದೇ ಮುಂತಾಗಿ ಕರೆಸಿಕೊಳ್ಳುವ ಅದೆಷ್ಟೋ ಥೀಮ್ ಪಾರ್ಕ್‌ಗಳು ದುಡ್ಡುಳ್ಳವರ ಮನ ತಣಿಸಲು ಕೈಬೀಸಿ ಕರೆಯುತ್ತವೆ.
 
ದಾರಿಯಲ್ಲೇ ಸಿಗುತ್ತದೆ ದಕ್ಷಿಣ ಭಾರತದ ಪ್ರಾಚೀನ ಬದುಕಿನ ಮೇಲೆ ಬೆಳಕು ಚೆಲ್ಲುವ, ವಸ್ತು ಸಂಗ್ರಹಾಗಾರದಂತೆಯೇ ಇದ್ದರೂ, ಅದರೊಳಗೆ ಹೊಕ್ಕರೆ, ನಮ್ಮ ಹಳೆಯ ಸಾಂಪ್ರದಾಯಿಕ ಮನೆಗಳೊಳಗೆ ಹೊಕ್ಕಂತಹ ಅನುಭವ ನೀಡುವ "ದಕ್ಷಿಣ ಚಿತ್ರ" ಎಂಬ ಕುಟೀರಗಳ ಸಮೂಹ. ಇಲ್ಲಿ ಜಾನಪದ ಕಲೆ, ಪುರಾತನ ವಸ್ತುಗಳು... ಇವುಗಳೆಲ್ಲವನ್ನೂ ಪೋಷಿಸಲಾಗುತ್ತದೆ.
 
ಬಂಗಾಳ ಕೊಲ್ಲಿಯ ತೀರದಲ್ಲೇ ನೆಲಸಿದೆ ನಾವು ಕುತೂಹಲದಿಂದ ಕಾಯುತ್ತಿದ್ದ ಮಹಾಬಲಿಪುರ. 7ರಿಂದ 10ನೇ ಶತಮಾನದಲ್ಲಿ ಪಲ್ಲವರ ಕಾಲದಲ್ಲಿ ಬಂದರು ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಾಣವಿದು. ಕಂಚೀಪುರವನ್ನು ಆಳಿದ ಪಲ್ಲವರ ಎರಡನೇ ರಾಜಧಾನಿಯಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಆಳುತ್ತಿದ್ದ ಬಲಿಚಕ್ರವರ್ತಿಯನ್ನು ಮಹಾವಿಷ್ಣುವು ಪಾತಾಳಕ್ಕೆ ತುಳಿದ ಎಂಬುದು ಪುರಾಣ ಕಥೆಗಳಿಂದ ಕೇಳಿಬರುವ ಸಂಗತಿ.
 
ಪಲ್ಲವರ ದೊರೆ ರಾಜಾ ನರಸಿಂಹ ವರ್ಮನು ಇದರ ಹೆಸರನ್ನು ಮಾಮಲ್ಲಪುರಂ ಎಂದು ಬದಲಾಯಿಸಿದ್ದ. ಯಾಕೆಂದರೆ ಬಲಾಢ್ಯನಾಗಿದ್ದ ಆತ ಮಲ್ಲಯುದ್ಧ ಪ್ರವೀಣನಾಗಿ ಮಾಮಲ್ಲ (ಮಹಾಮಲ್ಲ) ಎಂಬ ಬಿರುದು ಗಳಿಸಿದ್ದ. ಇದರ ನೆನಪಿಗೆ ಈ ಹೆಸರು.
 
ಗುಪ್ತರ ಆಳ್ವಿಕೆ ನಶಿಸಿ, ಪಲ್ಲವರು ದಕ್ಷಿಣ ಭಾರತದಲ್ಲಿ ಉತ್ಥಾನಕ್ಕೆ ಬಂದು, 3ನೇ ಶತಮಾನದಿಂದ 9ನೇ ಶತಮಾನದ ಅಂತ್ಯದವರೆಗೂ ಅವರ ಆಳ್ವಿಕೆಯೇ ಇತ್ತು. ಪಲ್ಲವರ ಶಿಲ್ಪಕಲಾ ಪರಿಣತಿ ಮತ್ತು ಅದರ ಕುರಿತ ಆಸಕ್ತಿ ನೋಡಬೇಕಿದ್ದರೆ ಮಹಾಬಲಿಪುರಕ್ಕೆ ಭೇಟಿ ನೀಡಬೇಕು ಎನ್ನಲಾಗುತ್ತದೆ. ಅಷ್ಟು ಅದ್ಭುತವಾಗಿವೆ ಇಲ್ಲಿನ ಕೆತ್ತನೆ ಕಾರ್ಯಗಳು.
 
ಬಂಡೆ ಕಡೆದು ನಿರ್ಮಿಸಿದ ಗುಹೆಗಳು, ಏಕ ಶಿಲೆಯಿಂದ ಮಾಡಿದ ಮಂದಿರಗಳು ಇಲ್ಲಿ ಸಿದ್ಧಿ-ಪ್ರಸಿದ್ಧಿಗೆ ಕಾರಣವಾಗಿವೆ. ಇಲ್ಲಿನ ಪ್ರಮುಖ ತಾಣಗಳು:
 
ಶೋರ್ ಟೆಂಪಲ್ (ಸಮುದ್ರತೀರದ ಮಂದಿರ):
 
7ನೇ ಶತಮಾನಕ್ಕೆ ಸೇರಿದ್ದ ಈ ಮಂದಿರವು ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದು. ಯುನೆಸ್ಕೋದಿಂದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿರುವ ಇದು ದ್ರಾವಿಡ ಶೈಲಿಯಲ್ಲಿದೆ. ಎರಡು ಶಿವ ಮಂದಿರಗಳು ಮತ್ತೊಂದು ವಿಷ್ಣುವಿನ ಮಂದಿರ ಇಲ್ಲಿದೆ. ವಿಷ್ಣುವು ಪವಡಿಸಿದ ರೂಪದ ವಿಗ್ರಹವನ್ನು ಒಂದೇ ದ್ವಾರದಿಂದ ಏಕಕಾಲಕ್ಕೆ ನೋಡುವುದು ಸಾಧ್ಯವಿಲ್ಲ. ಅಷ್ಟು ಉದ್ದವಿದೆ. ಸಪತ್ನೀಕ ಬ್ರಹ್ಮ ಮತ್ತು ವಿಷ್ಣು ವಿಗ್ರಹಗಳು, ನರಸಿಂಹ ಹಾಗೂ ದುರ್ಗಾ ವಿಗ್ರಹಗಳು ಗಮನ ಸೆಳೆಯುತ್ತವೆ. 2004ರಲ್ಲಿ ಸುನಾಮಿ ಅಲೆಗಳ ಅಬ್ಬರದಿಂದಾಗಿ ಅದೆಷ್ಟೋ ನಂದಿ ಮತ್ತಿತರ ವಿಗ್ರಹಗಳು ಇಲ್ಲಿ ಗೋಚರಿಸಿದವು. ಅಂದರೆ ಸಮುದ್ರ ತಳದಲ್ಲಿದ್ದದ್ದು ಮೇಲ್ಭಾಗಕ್ಕೆ ಬಂದವು.  
 
 ಈ ಮಂದಿರದ ಸುತ್ತ ಅವುಗಳನ್ನು ಜೋಡಿಸಿಡಲಾಗಿದೆ. ಮುಸ್ಸಂಜೆಯಲ್ಲಿ ಈ ಮಂದಿರವನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ.
 
ಮಹಾಬಲಿಪುರದ ಮತ್ತೊಂದು ಮಗ್ಗುಲಲ್ಲಿ, ಅರ್ಜುನ ಕಠಿಣ ತಪಸ್ಸು ಕೈಗೊಂಡ ಕಥಾನಕವನ್ನು ಬಿಂಬಿಸುವ ಆಕರ್ಷಕ ಶಿಲ್ಪವಿರುವ ತಾಣವು ಗಮನ ಸೆಳೆಯುತ್ತದೆ. ಇದೊಂದು ಬೃಹತ್ ತಿಮಿಂಗಿಲದ ರೂಪದಲ್ಲಿ ಗೋಚರಿಸುತ್ತದೆ. 27 ಮೀಟರ್ ಉದ್ದ 9 ಮೀಟರ್ ಎತ್ತರವಿರುವ ಈ ಬೃಹತ್ ಬಂಡೆಯು ಮಧ್ಯದಲ್ಲಿ ಒಡೆದಿದೆ. ಬಂಡೆಯ ಅಲ್ಲಲ್ಲಿ ದೇವ-ದೇವತೆಗಳು, ಅಪ್ಸರೆಯರು ಮುಂತಾದ ರೂಪಗಳನ್ನು ಕೆತ್ತಲಾಗಿದೆ. ಅರ್ಜುನನು ಕಾಯ ಭಾರೀ ತಪಸ್ಸು ಮಾಡಿ ದೇಹ ದಂಡಿಸಿಕೊಂಡ ಪುರಾಣ ಕಥೆಯನ್ನು ಉಲ್ಲೇಖಿಸುವ ಕೆತ್ತನೆಗಳು ಇಲ್ಲಿವೆ. "ಮಾರ್ಜಾಲ ಸನ್ಯಾಸ" ಎಂಬ ಪದದ ಅರ್ಥ ತಿಳಿಸುವ ಕೆತ್ತನೆಯೂ ಇಲ್ಲಿದೆ. ಸೂರ್ಯಚಂದ್ರರು, ಆನೆ, ಯಕ್ಷರು, ಗಂಧರ್ವರು, ವಿದ್ಯಾಧರರು, ಸಿದ್ಧರು, ಕಿನ್ನರರು, ಕಿಂಪುರುಷರು ಮುಂತಾದವರು ತಾಳ ವಾದ್ಯಗಳೊಂದಿಗೆ ಇಲ್ಲಿ ರಾರಾಜಿಸುತ್ತಾರೆ. ಅರ್ಜುನನ ಕಠಿಣಕಾಯ ತಪಸ್ಸು, ಮಾರ್ಜಾಲ ಸನ್ಯಾಸಿಯ ಅಣಕು ತಪಸ್ಸು ಕೂಡ ಇಲ್ಲಿ ಅತ್ಯುತ್ತಮವಾಗಿ ಬಿಂಬಿತವಾಗಿದೆ.
 
ಪಂಚರಥಗಳು:
ಮಹಾಬಲಿಪುರದಲ್ಲಿ ಗಮನ ಸೆಳೆಯುವ ಮತ್ತೊಂದು ಶಿಲ್ಪಕಲಾ ವೈಭವ ಎಂದರೆ ಪಂಚ ರಥಗಳು. ಪಂಚ ಪಾಂಡವರು ಹಾಗೂ ದ್ರೌಪದಿಗೆ ಸೇರಿದ ಶಿಲಾ ರಥಗಳು ಇಲ್ಲಿ ರಾರಾಜಿಸುತ್ತಿದೆ. ಎಲ್ಲವೂ ಕಲ್ಲಿನಿಂದಲೇ ಕಡೆದ, ದ್ರಾವಿಡ ಶೈಲಿಯ ಆಕರ್ಷಕ ಮಂದಿರಗಳು. ದ್ರೌಪದಿ ರಥ, ಅರ್ಜುನ ರಥ, ಭೀಮ ರಥ, ನಕುಲ-ಸಹದೇವರಿಗೊಂದು ರಥ ಹಾಗೂ ಯುಧಿಷ್ಠಿರ ರಥಗಳೊಂದಿಗೆ ಬೃಹದಾಕಾರದ ಆನೆಯ ವಿಗ್ರಹ ಇಲ್ಲಿ ಆಕರ್ಷಿಸುತ್ತಿದೆ. ಸಮೀಪದಲ್ಲಿ ಗಣೇಶ ರಥವೂ ಇದೆ.
 
ಇವುಗಳಲ್ಲದೆ, ಮಹಾಬಲಿಪುರಂನಲ್ಲಿ ನೋಡಲೇಬೇಕಾದ ಇತರ ಹಲವು ತಾಣಗಳೂ ಇವೆ. ತ್ರಿಮೂರ್ತಿ ಗುಹೆ, ಕೋಡಿಕ್ಕಲ್ ಮಂಟಪ, ರಾಮಾನುಜ ಮಂಟಪ, ಮಹಿಷಾಸುರ ಮರ್ದಿನಿ ಮಂಟಪಗಳಿವೆ. ಆದಿ ವರಾಹ ಮಂಟಪದಲ್ಲಿ ಮಹಾವಿಷ್ಣುವಿನ 9ನೇ ಅವತಾರವಾದ ಬುದ್ಧಾವತಾರವನ್ನು ಬಿಂಬಿಸಲಾಗಿದೆ. ಅಲ್ಲಿ ಹೋದ ತಕ್ಷಣ ಗಮನ ಸೆಳೆಯುವುದೆಂದರೆ ದೊಡ್ಡದೊಂದು ಉಂಡೆಯಾಕಾರದ ಬಂಡೆ. ಅದನ್ನು ಶ್ರೀಕೃಷ್ಣನ ಬೆಣ್ಣೆಯುಂಡೆ ಎಂದೇ ಕರೆಯಲಾಗುತ್ತದೆ. ಇಳಿಜಾರಿನಲ್ಲಿ ಅದು ಉರುಳದಂತೆ ಇರುವ ರೀತಿ ಅಚ್ಚರಿ ಹುಟ್ಟಿಸುತ್ತದೆ.
 
ಮುಂದೆ ಸಾಗಿದಾಗ, ಹಿಂದಿನ ಕಾಲದಲ್ಲಿ ಹಡಗುಗಳಿಗೆ ಮಾರ್ಗದರ್ಶನ ನೀಡಲು ಬೆಂಕಿಯ ಜ್ವಾಲೆ ಉರಿಸಲಾಗುತ್ತಿದ್ದ, ಎತ್ತರ ಭಾಗದಲ್ಲಿ ಕಲ್ಲಿನಿಂದಲೇ ಕಡೆದ ಮಂಟಪವೊಂದು ಎದುರಾಗುತ್ತದೆ. ಅದನ್ನೇರಿದರೆ ವಿಶಾಲ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶ ಕಾಣಿಸುತ್ತದೆ. ಈಗ ಪಕ್ಕದಲ್ಲಿ ಹೊಸದಾಗಿ ದೀಪಸ್ತಂಭ ನಿರ್ಮಿಸಲಾಗಿದೆ.
 
ಪಲ್ಲವರ ಕಾಲದ ಶಿಲ್ಪಕಲಾ ವೈಭವವನ್ನು ಸಾರುವ ಈ ತಾಣಗಳಿಗೆ ಭೇಟಿ ನೀಡಿ ಹೊರ ಬರುವಾಗ, ಅಲ್ಲಲ್ಲಿ ಕಲ್ಲಿನಿಂದ ಕಡೆದ ಪ್ರತಿಕೃತಿಗಳು ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುತ್ತಾರೆ. ಆದರೆ ಬೆಲೆಯೋ.... ಅಬ್ಬಬ್ಬಾ... ಅನಿಸುತ್ತದೆ. ಯಾಕೆ ಗೊತ್ತೇ? ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದ ಜಾಗ. ಹೆಚ್ಚಾಗಿ ವಿದೇಶೀಯರೇ ಬರುತ್ತಾರೆ. ಅಲ್ಲಿನವರಿಗೆ ಒಂದು ಪುಟ್ಟ ಕಲ್ಲಿನಿಂದ ಕಡೆದಿರುವ ಆನೆ ಕೇವಲ ಎಂಟ್ಹತ್ತು ಡಾಲರ್‌ನ ವಿಷಯ. ಭಾರತೀಯರಾದ ನಮಗೆ ಇದರ ಬೆಲೆ 400ರಿಂದ 500 ರೂಪಾಯಿ. ಪುಟ್ಟ ಆನೆ ಅಥವಾ ಪೇಪರ್‌ವೈಟ್‌ನಂತೆ ಉಪಯೋಗಿಸಬಲ್ಲ ಕಲ್ಲಿನಿಂದ ಕಡೆದ ವಸ್ತುಗಳು ನೂರು ರೂಪಾಯಿ ಆಸುಪಾಸಿಗೆ ದೊರೆಯುತ್ತದೆ.
 
ಎಲ್ಲಿ ಹೋದರೂ ವಿದೇಶೀಯರನ್ನು ಕಾಣಬಹುದು... ವಾವ್... ಯಾವ್... ವಾಹ್... ಎಂಬುದೇ ಉದ್ಗಾರಗಳು ಅಲ್ಲಲ್ಲಿ ಕೇಳಿಬರುತ್ತವೆಯೆಂದರೆ ಸಮೀಪದಲ್ಲಿ ವಿದೇಶೀಯರಿದ್ದಾರೆಂದರ್ಥ!.
 
ಇನ್ನು, ನಮ್ಮದೇ ಪೂರ್ವಜರಾದ ಕೋತಿಗಳು ಕೂಡ ಅಲ್ಲಿ ಸರ್ವೇ ಸಾಮಾನ್ಯವಾಗಿ ಅಡ್ಡಾಡುತ್ತಿರುತ್ತವೆ. ಪ್ರವಾಸಿಗರ ಕೈಯಲ್ಲಿದ್ದದ್ದನ್ನು ಕಿತ್ತುಕೊಳ್ಳಲು ಅವುಗಳಿಗೆ ಯಾವುದೇ ಭಯವಾಗಲೀ, ನಾಚಿಕೆಯಾಗಲೀ ಇಲ್ಲ. ಅವುಗಳು ಕೂಡ ಹಸಿದಿರುತ್ತವೆ, ಬಾಯಾರಿರುತ್ತವೆ. ಹಾಗಾಗಿ ಪ್ರವಾಸಿಗರು ತಂದ ಜ್ಯೂಸ್ ಅಥವಾ ಕೋಲಾ ಬಾಟಲಿಗಳನ್ನು ಕೂಡ ಯಾವುದೇ ಎಗ್ಗಿಲ್ಲದೆ ಎತ್ತಿ ಕುಡಿಯುತ್ತವೆ!
 
ಸಂಜೆಗತ್ತಲಾಗುತ್ತಿದ್ದಂತೆ ಮರಳಿದಾಗ, ಅಲ್ಲಿ ಅಡ್ಡಾಡುತ್ತಾ ಬೆವರಿದ್ದ ನಮ್ಮನ್ನು ತಂಪು ಮಾಡಲೆಂದು ಮಳೆರಾಯನೂ ಜೋರಾಗಿಯೇ ಇಳೆಗಿಳಿದುಬಿಟ್ಟ. ಚೆನ್ನೈಗೆ ಮರಳಿದಾಗ ಮಳೆಯ ಪತ್ತೆಯೇ ಇಲ್ಲ. ಎಂದಿನ ಸೆಖೆ ಮುಂದುವರಿದಿತ್ತು.

Share this Story:

Follow Webdunia kannada