Select Your Language

Notifications

webdunia
webdunia
webdunia
webdunia

ಹನಿಮೂನ್‌ಗೆ ಮೊದಲ ಹೆಸರು ಕೊಡೈಕೆನಾಲ್

ಹನಿಮೂನ್‌ಗೆ ಮೊದಲ ಹೆಸರು ಕೊಡೈಕೆನಾಲ್
WD


ರಾಜೇಶ್ ಪಾಟೀಲ್

ಭಾರತೀಯ, ಅದರಲ್ಲೂ ದಕ್ಷಿಣ ಭಾರತೀಯ ನವದಂಪತಿಗಳು ಮಧುಚಂದ್ರಕ್ಕೆ ಹೋಗಬೇಕೆಂದಿದ್ದಾಗ ಅವರ ಮನಸ್ಸಿನಲ್ಲಿ ಸುಳಿದಾಡುವ ಮೊದಲ ಕೆಲವು ಪದಗಳಲ್ಲಿ ಕೊಡೈಕೆನಾಲ್ ಕೂಡ ಒಂದು. ನವದಂಪತಿಗಳಷ್ಟೇ ಅಲ್ಲದೇ, ಅನುಭವೀ ದಂಪತಿಗಳು ಹಾಗೂ ಭಾವೀ ದಂಪತಿಗಳಿಗೆಂದು ಹೇಳಿ ಮಾಡಿಸಿದ ತಾಣ ಕೊಡೈಕೆನಾಲ್.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಕೊಡೈ ಅರ್ಥಾತ್ ಕೊಡೈಕೆನಾಲ್ ಪ್ರದೇಶವು ತನ್ನ ಭೂಸಿರಿಯಿಂದ ಜನರನ್ನು ವಿಸ್ಮಯಗೊಳಿಸುತ್ತದೆ. ಮಧುರೈಯಿಂದ 120 ಕಿಲೋಮೀಟರ್ ದೂರವಿರುವ ಕೊಡೈಕೆನಾಲ್‌ನಲ್ಲಿ ನೋಡಬೇಕಾದ್ದಕ್ಕಿಂತ ಅನುಭವಿಸಬೇಕಾದ ಸ್ಥಳಗಳು ಸಾಕಷ್ಟಿವೆ. ಪಶ್ಚಿಮ ಘಟದ ಭವ್ಯವಾದ ಪಳನಿ ಗುಡ್ಡಗಳ ದಕ್ಷಿಣ ಭಾಗದಲ್ಲಿ ಕೊಡೈಕೆನಾಲ್ ನೆಲೆಗೊಂಡಿದೆ. ವರ್ದಾಂತ್ ಪಾಳಿ ಗುಡ್ಡಗಳಿಂದ ಅದು ಆವೃತ್ತವಾಗಿದೆ.

webdunia
PR
ಸಮುದ್ರಮಟ್ಟದಿಂದ 2133 ಮೀಟರ್ ಎತ್ತರವಿರುವ ಕೊಡೈಕೆನಾಲ್‌ನಲ್ಲಿ ಇಡೀ ವರ್ಷ ತಂಪಿನ ವಾತಾವರಣ ನೆಲೆಸಿರುವುದು ವಿಶೇಷ. ಬೇಸಿಗೆಯಲ್ಲಿ 20 ಡಿಗ್ರೀ ಸೆಲ್ಶಿಯಸ್‌ನ ಆಸುಪಾಸು ಇದ್ದರೆ, ಚಳಿಗಾಲದಲ್ಲಿ ಉಷ್ಣಾಂಶ 8 ಡಿಗ್ರೀವರೆಗೂ ಇಳಿಯುತ್ತದೆ. ಇದಲ್ಲದೆ, ಬಹುತೇಕ ವರ್ಷವಿಡೀ ಮಳೆ ಬೀಳುವ ಸಂಭವ ಅಧಿಕವಿರುವುದರಿಂದ ಪ್ರವಾಸಿಗರು ತಪ್ಪದೇ ರೈನ್‌ಕೋಟ್‌ಗಳನ್ನು ಹಾಗೂ ಬೆಚ್ಚಗಿನ ಹೊದಿಕೆಗಳನ್ನು ತೆಗೆದುಕೊಂಡುಹೋಗಬೇಕಾಗುತ್ತದೆ.

ಬೇರಿಜಮ್ ಎಂಬ ಮಾನವ ನಿರ್ಮಿತ ಕೊಳವು ಸೌಂದರ್ಯಕ್ಕೆ ಮತ್ತೊಂದು ಹೆಸರು. ಪರಿಶುದ್ಧ ನೀರು, ದಂಡಯಲ್ಲಿರುವ ಗಿಡಮರಗಳ ಅದ್ಭುತ ನೈಸರ್ಗಿಕ ಸಂಯೋಜನೆಯಿಂದ ಈ ಕೊಳವು ಪ್ರವಾಸಿಗರ ಮನಸ್ಸಿಗೆ ಮುದನೀಡುತ್ತದೆ. ಈ ಕೊಳದಲ್ಲಿ ದೋಣಿ ವಿಹಾರ ಮಾಡಿಬಂದರೆ ಸ್ವರ್ಗವನ್ನು ಅನುಭವಿಸಿದಂತೆ ಎಂಬುದು ಪ್ರವಾಸಿಗರ ಅನುಭವೀ ಹೇಳಿಕೆ. ಈ ಕೊಳದ ಪಕ್ಕದಲ್ಲಿಯೇ ಬೈರಂತ್ ಸಸ್ಯಧಾಮವಿದೆ. ಹಾಗೆಯೇ ಶೆಂಬಗನೂರು ಮ್ಯೂಸಿಯಂ ಕೂಡ ಪ್ರವಾಸಿಗರ ಕುತೂಹಲಕ್ಕೆ ಆಹಾರವಾಗಿ ಸಿದ್ಧವಿದೆ. ಕೊಡೈಕೆನಾಲ್‌ನಲ್ಲಿ ಹಿಂದೆ ಇದ್ದ ಪಾಳಿಯನ್ ಬುಡಕಟ್ಟು ಜನರ ಕುಸುರಿಕಲೆಯ ವಸ್ತುಗಳನ್ನು ನೀವು ಈ ಮ್ಯೂಸಿಯಂನಲ್ಲಿ ನೋಡಬಹುದು. ಕೊಡೈಕೆನಾಲ್‌ನ ಅಣತಿ ದೂರದಲ್ಲಿ ನೀವು ಪಳನಿ ರಾಷ್ಟ್ರೀಯ ವನ್ಯಧಾಮವನ್ನೂ ನೋಡಿ ಆನಂದಿಸಬಹುದು.

webdunia
PR
ನಿಮಗೆ ಈ ಸ್ಥಳಗಳ್ಯಾವುವೂ ಇಷ್ಟವಾಗದಿದ್ದರೆ ಅಥವಾ ಮಾಮೂಲು ಎಂದೆನಿಸಿದರೆ ಕೊಡೈಕೆನಾಲ್‌ನ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಅದರ ಪ್ರತಿಯೊಂದು ಜಾಗವೂ ಸೌಂದರ್ಯದ ಖನಿ. ಬೆಟ್ಟ ಗುಡ್ಡಗಳು, ಮರಗಿಡಗಳು, ಕೊಳಗಳು ಹೀಗೆ ಪ್ರತಿಯೊಂದೂ ನಿಮ್ಮನ್ನು ಆಕರ್ಷಿಸುತ್ತವೆ. ಈ ಸೌಂದರ್ಯಗಳ ನಡುವೆ ಸುತ್ತಮುತ್ತ ಸ್ಥಳಗಳಿಗೆ ಟ್ರಕ್ಕಿಂಗ್ ಹೊರಟರೆ ಅದರ ಅನುಭವವೇ ಅವರ್ಣನೀಯ.

ತಂಪಾದ ವಾತಾವರಣ, ಕಂಪಿನ ಸೌಂದರ್ಯದ ಮೂಲಕ ಪ್ರೇಮಿಗಳ ಮನಸ್ಸನ್ನು ಬೆಚ್ಚಗಾಗಿಸುವ, ಕುಟುಂಬದವರ ಮನಸ್ಸನ್ನು ಪ್ರಫುಲ್ಲಗೊಳಿಸಿ ಖುಷಿಯಲ್ಲಿ ಒಂದುಗೂಡಿಸುವ ಕೊಡೈಕೆನಾಲ್ ಪ್ರದೇಶಕ್ಕೆ ಪ್ರತಿಯೊಬ್ಬರೂ ಒಮ್ಮೆ ಭೇಟಿ ನೀಡುವುದು ಒಳ್ಳೆಯದು.

webdunia
WD
ಕೊಡೈಕೆನಾಲ್ ತಲುಪುವುದು ಹೇಗೆ?

ಚೆನ್ನೈ, ಊಟಿ, ತಿರುಚ್ಚಿ, ಕೊಯಂಬತ್ತೂರು, ಮಧುರೈಗಳಿಂದ ಕೊಡೈಕೆನಾಲ್‌ಗೆ ಬಸ್ ಸಂಚಾರವಿದೆ. ಪಳನಿ, ಥೇಣಿ, ದಿಂಡಿಗಲ್, ತೆಕ್ಕಾಡಿ ಮತ್ತು ಕೊಯಮತ್ತೂರುಗಳಿಂದಲೂ ನಿಯಮಿತವಾಗಿ ಬಸ್ ಸಂಚಾರವಿದೆ. ಕೊಡೈಕೆನಾಲ್‌ನಲ್ಲಿ ಸ್ಥಳೀಯವಾಗಿ ಟ್ಯಾಕ್ಸಿ ಮತ್ತು ವ್ಯಾನ್‌ಗಳ ವ್ಯವಸ್ಥೆಯಿದೆ.

ವಿಮಾನದ ಮೂಲಕ ಬರುವುದಾದರೆ ಕೊಡೈಕೆನಾಲ್‌ಗೆ 120 ಕಿಮೀ ದೂರದಲ್ಲಿರುವ ಮಧುರೈಗೆ ಬಂದಿಳಿಯಬಹುದು. ಅಲ್ಲಿಂದ ಬಸ್ ವ್ಯವಸ್ಥೆಯಿದೆ. ರೈಲು ಹತ್ತಿ ಬರುವುದಾದರೆ ನಿಮಗೆ ಕೊಡೈ ರೋಡ್ ರೇಲ್ವೆ ನಿಲ್ದಾಣ ಅಥವಾ ಪಳನಿ ರೇಲ್ವೆ ನಿಲ್ದಾಣಗಳಲ್ಲಿ ಇಳಿಯಬಹುದು. ಕೊಡೈಕೆನಾಲ್ ಪ್ರದೇಶವು ಕೊಡೈ ರಸ್ತೆ ರೇಲ್ವೆ ನಿಲ್ದಾಣದಿಂದ 80 ಕಿಮೀ ಹಾಗೂ ಪಳನಿ ರೇಲ್ವೆ ನಿಲ್ದಾಣದಿಂದ 64 ಕಿಮೀ ದೂರವಿದೆ. ಆ ಎರಡೂ ಸ್ಥಳದಿಂದಲೂ ಬಸ್ ವ್ಯವಸ್ಥೆಯಿದೆ.

Share this Story:

Follow Webdunia kannada