Select Your Language

Notifications

webdunia
webdunia
webdunia
webdunia

ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ

ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ
, ಸೋಮವಾರ, 9 ಜನವರಿ 2012 (16:30 IST)
WD
ಚಾರಣ ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿ ಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮತ್ತು ರಾತ್ರಿ ವೇಳೆಯಲ್ಲಿ ತಂಗುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ಯ, ನಾಯಕತ್ವ, ಸಂಘ ಶಕ್ತಿ, ಸೂಕ್ತ ಯೋಜನೆ, ಮನೋಲ್ಲಾಸ ಹೆಚ್ಚುಸುವಲ್ಲಿ ಸಹಕಾರಿಯಾಗುತ್ತದೆ.

ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ತಯಾರಿ ಮಾಡುವುದು ಅತೀ ಮುಖ್ಯ. ಮೊದಲು ಆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ, ನಂತರ ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಿಕೊಳ್ಳಬೇಕು. ಮುಖ್ಯವಾಗಿ ಚಾರಣದ ಹಾದಿಯಲ್ಲಿ ನೀರಿನ ಲಭ್ಯತೆಯನ್ನು ಮೊದಲೆ ತಿಳಿದುಕೊಳ್ಳಬೇಕು. ಚಾರಣದ ವೇಳೆಯಲ್ಲಿ ಚಾರಣಿಗರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ತಮ್ಮ ಜೊತೆ ಕೊಂಡೊಯ್ಯಬೇಕು ಮತ್ತು ಮಲಗಲು ಬೇಕಾದ ಸರಂಜಾಮುಗಳನ್ನು ಕೂಡ ಕೊಂಡೊಯ್ಯಬೇಕು. ಹೀಗೆ ಪ್ರತಿಯೊಂದು ಯೋಜನೆಗಳನ್ನು ಚೆನ್ನಾಗಿ ಆಲೋಚಿಸಿ ಮಾಡಬೇಕು. ಅದೇ ರೀತಿ ಚಾರಣಕ್ಕೆ ನಮಗೆ ಗೊತ್ತಿರುವ ಪ್ರದೇಶವಾದರೆ ಇನ್ನೂ ಉತ್ತಮ.

ನಮ್ಮ ರಾಜ್ಯದಲ್ಲಿಯೇ ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ , ಚಾರಣ ನಡೆಸಲು ಯೋಗ್ಯವಾದ ಸುಂದರ ತಾಣಗಳಿವೆ. ಇಂತಹ ಸುಂದರ ಚಾರಣ ಪ್ರದೇಶವೇ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕುಮಾರಪರ್ವತ. ಒಂದೆಡೆ ಹಸಿರು ಸೀರೆಯುಟ್ಟ ಪ್ರಕೃತಿ ಮಡಿಲಾದರೆ, ಇನ್ನೊ೦ದೆಡೆ ಮುಳಿ ಹುಲ್ಲಿನಿಂದ ನುಣುಪಾಗಿರುವಂತೆ ತೋರುವ ಎತ್ತರ ಶಿಖರ ಭಾಗ. ಮತ್ತೊಂದೆಡೆ ಕಪ್ಪು ಬ೦ಡೆಗಳ ಕಡಿದಾದ ರುದ್ರ ರಮಣೀಯ ದೃಶ್ಯ. ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಹಿಂಬಾಗಿಲಿನ ಈ ಪರ್ವತ, ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸುಂದರ ಪ್ರಕೃತಿಯ ಜೊತೆಗೆ ಜಂಘಾಬಲಕ್ಕೆ ಸವಾಲೊಡ್ಡುವ ರಮಣೀಯ ತಾಣ. ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಏರಬೇಕಾದರೆ 12 ಕಿ.ಮೀ. ನಡೆದೇ ಸಾಗಬೇಕು. ಚಾರಣ ಪ್ರಾರಂಭಿಸಿ ಸುಮಾರು 3 ಕಿ.ಮೀ. ಸಾಗಿದರೆ ಭೀಮನ ಕಲ್ಲು, 5 ಕಿ.ಮೀ. ನಡೆದರೆ ಗಿರಿಗದ್ದೆ, 8 ಕಿ.ಮೀ. ದೂರದಲ್ಲಿ ಕಲ್ಲು ಚಪ್ಪರ, 10 ಕಿ.ಮೀ. ಕ್ರಮಿಸಿದರೆ ಭತ್ತದರಾಶಿ ಮುಂದೆ ದೂರದಿಂದ ಕುಮಾರಪರ್ವತ ಎಂದು ಜನ ಗುರುತಿಸುವ ಶೇಷಪರ್ವತ. ಅದನ್ನು ದಾಟಿದರೆ ಸಿಕ್ಕುವುದು ಅದಕ್ಕಿಂತ ಎತ್ತರದ ಕುಮಾರ ಪರ್ವತ. ಇದರ ಎತ್ತರ ಸಮುದ್ರ ಮಟ್ಟದಿಂದ ಸುಮಾರು 5,615 ಅಡಿ.

ಮನೋಹರ್.ವಿ.ಶೆಟ್ಟಿ ಹೆಬ್ರಿ

webdunia
WD
ಚಾರಣಿಗರಿಗೆ ಸಿಗುವ ತಾಣ: ಸುಬ್ರಹ್ಮಣ್ಯದಿಂದ ಚಾರಣಕ್ಕೆ ಹೊರಟವರಿಗೆ ಮೊದಲು ಸಿಕ್ಕುವ ನೀರಿನ ತಾಣ ಭೀಮನ ಕಲ್ಲು. ಈ ಬ೦ಡೆಯ ಗಾತ್ರ ನೋಡಿಯೇ ಇದಕ್ಕೆ ಭೀಮನ ಕಲ್ಲು ಎಂದಿರಬೇಕು. ಇಲ್ಲಿಂದ ಮುಂದೆ ಸಾಗಿದರೆ ಸಿಗುವ ಕಲ್ಲುಗುಡ್ಡೆ ಏರಲು ಸ್ವಲ್ಪ ಕಷ್ಟಸಾಧ್ಯ. ಬಹುಪಾಲು ದಟ್ಟಾರಣ್ಯ ಇಲ್ಲಿಗೆ ಕೊನೆಯಾಗುತ್ತದೆ. ಮುಂದೆಲ್ಲಾ ಕಣಿವೆ ಪ್ರದೇಶದಲ್ಲಿ ಕುರುಚಲು ಅರಣ್ಯ. ಅದಕ್ಕಿಂತ ಮುಂದೆ ಸಾಗಿದರೆ ಸಿಗುವುದು ಗಿರಿಗದ್ದೆಯ ನಾರಾಯಣ ಭಟ್ಟರ ಮನೆ. ಪೂರ್ವ ಮಾಹಿತಿ ನೀಡಿ ಬರುವ ಚಾರಣಿಗರಿಗೆ ಇಲ್ಲಿ ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಅರಣ್ಯ ಇಲಾಖೆಯಿಂದ ಎರಡು ಕಡೆ ಪ್ರಕೃತಿ ವೀಕ್ಷಣೆಗೆ ವೀಕ್ಷಣಾ ತಾಣ ನಿರ್ಮಿಸಲಾಗಿದೆ. ಸಮೀಪದಲ್ಲಿ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರವೂ ಇದೆ.

ಶುಲ್ಕ: ಮುಂದಿನದು ವನ್ಯಪ್ರಾಣಿಗಳ ರಕ್ಷಿತಾರಣ್ಯ. ಆದ್ದರಿಂದ ಇಲಾಖೆಯ ಅನುಮತಿ ಪಡೆದು, ಶುಲ್ಕ ತೆತ್ತು ಮುನ್ನಡೆಯಬೇಕು. ಪ್ರವೇಶ ಶುಲ್ಕ 40 ರೂ., ಚಾರಣ ಶುಲ್ಕ 100 ರೂ., ಕ್ಯಾಮರಾ ಕೊಂಡೊಯ್ಯುವುದಾದರೆ 50 ರೂ. ಇಲಾಖೆ ನೀಡುವ ಮಾರ್ಗದರ್ಶಿಗಳ ಅಗತ್ಯವಿದ್ದರೆ 100 ರೂ. ಪಾವತಿಸಬೇಕು. ಇವುಗಳ ಜೊತೆಗೆ ವಾಹನ ನಿಲುಗಡೆ ಶುಲ್ಕ 40 ರೂ.

webdunia
WD
ಮಂಗಳೂರು, ಹಾಸನ ಹಾಗೂ ಮಡಿಕೇರಿ ವಿಭಾಗಗಳಲ್ಲಿ ಚಾಚಿಕೊಂಡಿರುವ ಈ ರಕ್ಷಿತಾರಣ್ಯ ಭಾಗ 18,172 ಹೆಕ್ಟೇರ್ ವಿಸ್ತಾರ. 6 ಇಲಾಖಾ ತಪಾಸಣಾ ಕೇಂದ್ರಗಳಿದ್ದು, ಅರಣ್ಯ ಇಲಾಖೆಯ ಮಾಹಿತಿಯಂತೆ ಹುಲಿಗಳು, ಆನೆಗಳು, ಕಾಡು ಕೋಣಗಳು, ಕಡವೆ, ಜಿಂಕೆ, ಮೊಲ ಹಾಗೂ ನವಿಲು ಮುಂತಾದ ಪ್ರಾಣಿಗಳಿವೆ.

ಕಲ್ಲಿನ ಮಂಟಪ: ಇಲ್ಲಿಂದ ಮುಂದೆ ಹಾವು ಹರಿದಂತಿರುವ ಕಾಲುದಾರಿಯಲ್ಲಿ ಶರೀರದ ಸಮತೋಲನ ತಪ್ಪದಂತೆ ನಡೆಯಬೇಕು. ಒಂದಕ್ಕಿಂತ ಒಂದು ಎತ್ತರದ ಶಿಖರ. ಈ ದಾರಿಯಲ್ಲಿ ಭತ್ತದ ರಾಶಿಯ ಬುಡದಲ್ಲಿ ಒಂದು ಕಲ್ಲಿನ ಮಂಟಪವಿದೆ. ನಾಲ್ಕು ಕಲ್ಲಿನ ಕಂಬಗಳು. ಅವುಗಳ ಮೇಲೆ ಕಲ್ಲಿನ ಚಪ್ಪಡಿಗಳ ಹೊದಿಕೆ. ಬಳಿಯಲ್ಲಿ ಇಲಾಖೆ ನಿರ್ಮಿಸಿದ ಒಂದು ಕೆರೆಯಿದೆ. ಚಾರಣಿಗರಿಗೆ ವಿಶ್ರಾಂತಿಗೆ, ಆಹಾರ ತಯಾರಿಕೆಗೆ ಈ ಪ್ರದೇಶ ಅನುಕೂಲಕರ. ಸಮೀಪದಲ್ಲಿ ಒಂದು ಬಿಲವಿತ್ತು. ಅಲ್ಲಿಂದ ಸುಬ್ರಹ್ಮಣ್ಯಕ್ಕೆ ನೇರ ಸಂಪರ್ಕವಿತ್ತು ಎನ್ನುತ್ತಿದ್ದರು. ಈಗ ಅದು ಮರೆಯಾಗಿದೆ. ಅಲ್ಲದೆ ತಮಗೆ ಬೇಕಾಗುವ ನೀರಿನ ವ್ಯವಸ್ಥೆಯೆಲ್ಲವನ್ನು ಇಲ್ಲಿಂದಲೇ ಚಾರಣಿಗರು ಪೂರೈಸಿಕೊಳ್ಳಬೇಕು....

webdunia
WD
ಮುಂದೆ ಸಾಗಿದರೆ ಶಿಖರ ಭಾಗದಲ್ಲಿ ಮರಗಳಿಲ್ಲದ, ಸಾಕಷ್ಟು ಸಮೃದ್ಧ ಮುಳಿಹುಲ್ಲು ಬೆಳೆದ, ಭತ್ತದರಾಶಿ ಎಂಬ ಪರ್ವತ. ಸುಮಾರು 8ಕಿ.ಮೀ. ಚಾರಣ ಮಾಡಿ ದಣಿದ ಜೀವಗಳಿಗೆ ಇದರ ಎತ್ತರ ಸವಾಲಾಗಿಯೇ ಕಾಣುತ್ತದೆ. ಆದರೆ ಮೈಮೇಲೆ ಹಾದುಹೋಗುವಂತೆ ಭಾಸವಾಗುವ ಮೋಡ. ಇಲ್ಲಿನ ತಂಪಾದ ಗಾಳಿ, ಮೈದಡವುತ್ತದೆ. ಭತ್ತವನ್ನು ರಾಶಿ ಮಾಡಿದಂತೆ ಕಾಣುವ ಈ ಬೆಟ್ಟಕ್ಕೆ ಭತ್ತದರಾಶಿ ಅಂತಲೂ ಕರೆಯುತ್ತಾರೆ..

ಶೇಷಪರ್ವತ: ಇಲ್ಲಿಂದ ಮುಂದೆ ಸಾಗಿದರೆ ಸಿಗುವುದು ಶೇಷ ಪರ್ವತ. ಮೇಲೆ ಸಾಗುವಾಗ ಬಲಭಾಗದಲ್ಲಿ ಕಾಲಿನಲ್ಲಿ ನಡುಕ ಉಂಟು ಮಾಡುವಷ್ಟು ಆಳದ ಕಂದಕ. ಕಪ್ಪು ಬ೦ಡೆಗಳುಳ್ಳ, ದೃಷ್ಟಿ ಹರಿಸಿದಷ್ಟೂ ದೂರ ಹಸಿರನ್ನು ಹೊದಿಸಿದಂತಿರುವ ಮಾರಿಗುಂಡಿ. ಈ ಜಾಗದಲ್ಲಿ ತಗ್ಗಿನಲ್ಲಿ ಹಾರಿಬ೦ದ ಮೋಡ ಮೈಗೆ ಸೋಂಕಿದಾಗ ಆಗುವ ರೋಮಾಂಚನಕ್ಕೆ ಬೇರಾವುದೂ ಸರಿಸಾಟಿಯಾಗಲಾರದು. ಇಲ್ಲಿಂದ ಮುಂದೆ ಸಾಗಿ ನೀರಿನ ಸೋಗೊಂದನ್ನುದಾಟಿ, ಸುಮಾರು 50 ಕಿ.ಮೀ. ಎತ್ತರ ವಾಗಿಯೂ ಕಡಿದಾಗಿಯೂ ಇರುವ ಹೆಬ್ಬ೦ಡೆ ಏರಿ ಸಾಗಿದರೆ ಕುಮಾರಪರ್ವತದ ತುದಿ ಏರಿದಂತೆ. ಅಲ್ಲೊಂದು ಗುಡಿಯಿದೆ. ಇನ್ನೊದು ದಿಕ್ಕಿನಲ್ಲಿ ಸೋಮವಾರಪೇಟೆ ಕಡೆಯ ಸುಂದರ ನಯನಮನೋಹರ ದೃಶ್ಯಾವಳಿ.

webdunia
WD
ಈ ದಿಕ್ಕಿನ ಹೆಗ್ಗಡೆಮನೆ ಕಡೆಯಿಂದ ಚಾರಣಕ್ಕೆ ಸಾಕಷ್ಟು ಜನ ಬರುತ್ತಾರೆ. ಪರ್ವತದ ತುದಿಯಲ್ಲಿ ಮಣ್ಣುಕೆದಕಿ ಹುಡುಕಿದರೆ ಅದೃಷ್ಟವಂತರಿಗೆ ಷಡ್ಬುಜಾಕಾರದ ಲಿಂಗ ಸಿಗುವುದು ಎಂಬುದು ಪ್ರತೀತಿ. ಹಾಗಾಗಿ ಅದೃಷ್ಟ ಪರೀಕ್ಷೆಗಾಗಿ ಎದುರಲ್ಲಿ ಅಥವಾ ಕದ್ದುಮುಚ್ಚಿ ಲಿಂಗ ಹುಡುಕುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಅಂತೂ ಕುಮಾರಪರ್ವತ ಚಾರಣ ಪ್ರಿಯರಿಗೆ ಹಾಗೂ ಪ್ರಕೃತಿ ವೀಕ್ಷಕರಿಗೆ ಸ್ವರ್ಗ ಅಂದರೂ ತಪ್ಪಾಗಲಾರದು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada