ಕೊಡಗಿನಲ್ಲಿ ಅಪರೂಪದ ಪುಷ್ಪೋದ್ಯಾನ
ಪುಷ್ಪೋದ್ಯಾನ ಎಂದಾಗ ಥಟ್ಟನೆ ನಮ್ಮ ಕಣ್ಮುಂದೆ ಬರುವುದು ಮೈಸೂರಿನ ಬೃಂದಾವನ ಅಥವಾ ಬೆಂಗಳೂರಿನ ಲಾಲ್‌ಬಾಗ್. ಆದರೆ ಕೊಡಗಿನಲ್ಲಿಯೂ ಸುಂದರವಾದ, ವೈಶಿಷ್ಟ್ಯಪೂರ್ಣವಾದ ಹವ್ಯಾಸದಿಂದ ನಿರ್ಮಾಣವಾದಂತಹ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಎಂಬ ಖಾಸಗಿ ಪುಷ್ಪೋದ್ಯಾನವಿದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಪುಷ್ಪೋದ್ಯಾನ ಕೊಡಗಿಗೊಂದು ಹೆಮ್ಮೆ ಎಂದರೆ ತಪ್ಪಾಗಲಾರದು. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಮಡಿಕೇರಿಯಿಂದ ಕುಶಾಲನಗರದ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಎಂಟು ಕಿ.ಮೀ ಸಾಗಿದರೆ ಬೋಯಿಕೇರಿ ಸಿಗುತ್ತದೆ. ಇಲ್ಲಿನ ಬಲ್ಯಾಟ್ರಿ ಎಸ್ಟೇಟಿನಲ್ಲಿ ನಿರ್ಮಾಣಗೊಂಡಿದೆ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ. ಈ ಗಾರ್ಡನ್ ನೋಡಲು ಜನವರಿ 21 ಮತ್ತು 22ರಂದು ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುಷ್ಪಪ್ರೇಮಿಗಳು ಅತ್ತ ಹೆಜ್ಜೆ ಹಾಕತೊಡಗಿದ್ದಾರೆ.
ಸುತ್ತಲೂ ಕಾಫಿ ತೋಟಗಳು, ದೂರದ ಬೆಟ್ಟಗಳು, ಹಸಿರು ಹಚ್ಚಡದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಈ ಪುಷ್ಪೋದ್ಯಾನ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆಯಲ್ಲದೆ, ಇದಕ್ಕೆ ಸುಮಾರು ಅರ್ಧ ಶತಮಾನಗಳನ್ನು ಪೂರೈಸಿದ ಇತಿಹಾಸವೂ ಇದೆ.ಹಾಗೆ ನೋಡಿದರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸಗಳಿರುತ್ತವೆ. ಅದರಂತೆ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಎಫ್.ಎಂ.ಖಾನ್ ಅವರ ತಂದೆ ಯೂಸೂಫ್ ಆಲಿಖಾನ್ ಪುಷ್ಪಪ್ರೇಮಿಗಳಾಗಿದ್ದರು. ಹಾಗಾಗಿ ಅವರು ತಮ್ಮ ಮನೆಯ ಮುಂದಿನ ತೋಟದಲ್ಲಿ ಪುಷ್ಪೋದ್ಯಾನ ನಿರ್ಮಿಸಿ ಅದಕ್ಕೆ ವಿವಿಧ ಬಗೆಯ ಹೂಗಿಡಗಳನ್ನು ಸೇರಿಸುತ್ತಾ ಹೋದರು. ಹಾಗೆ ನಿರ್ಮಾಣಗೊಂಡ ಪುಷ್ಪೋದ್ಯಾನ ಇಂದು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಎಂಬ ಹೆಸರಿನಿಂದ ಗಮನಸೆಳೆಯುತ್ತಿದೆ.
ಅವತ್ತು ತಂದೆ ನಿರ್ಮಿಸಿದ ಪುಷ್ಪೋದ್ಯಾನ ಇಂದು ಮಗ ಎಫ್.ಎಂ.ಖಾನ್ ಅವರು ಹೊಸ ರೂಪ ನೀಡಿ ಮುಂದುವರೆಸಿಕೊಂಡು ಬಂದಿದ್ದಾರೆ. ನಾವು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಒಳಗೆ ಕಾಲಿಟ್ಟಿದ್ದೇ ಆದರೆ ನಮಗೊಂದು ವಿಶಿಷ್ಟ ಅನುಭವವಾಗುತ್ತದೆ. ಏಕೆಂದರೆ ಇದೊಂದು ಸಾಧಾರಣ ಉದ್ಯಾನವನವಾಗಿರದೆ ರಾಷ್ಟ್ತ್ರೀಯ, ಅಂತರರಾಷ್ಟ್ತ್ರೀಯ ಖ್ಯಾತಿಯ ವಿಶಿಷ್ಟ ಜಾತಿಯ ಪುಷ್ಪಗಿಡಗಳು ಈ ಉದ್ಯಾನವನದಲ್ಲಿ ಸ್ಥಾನಪಡೆದಿವೆ. ಇಲ್ಲಿ ವಿವಿಧ ಬಗೆಯ ಪುಷ್ಪಗಿಡಗಳು ಅರಳಿ ಕಂಗೊಳಿಸುವುದನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ.ಕಣ್ಣು ಹಾಯಿಸಿದುದ್ದಕ್ಕೂ ಕಣ್ಸೆಳೆಯುವ ಬೇಲಿಗಿಡಗಳು, ಮೇಲೆ ಚಪ್ಪರದಲ್ಲಿ, ಕೆಳಗೆ ನೆಲದಲ್ಲಿ ಅರಳಿ ಕಂಗೊಳಿಸುವ ವಿವಿಧ ಬಗೆಯ ಪುಷ್ಪಗಿಡಗಳು, ಹಲವು ದಶಕಗಳನ್ನು ಸವೆಸಿದ ಕುಬ್ಜ ಬೋನ್ಸಾಯ್ಗಳು, ಮುಳ್ಳಿನ ಹೊದಿಕೆಯ ಕ್ಯಾಕ್ಟಸ್ಗಳು, ಮರಗಳಲ್ಲಿ, ಕುಂಡಗಳಲ್ಲಿ ನೇತಾಡುವ ಆರ್ಕಿಡಾಗಳು, ವಿವಿಧ ನಮೂನೆಯ ಎಲೆಗಿಡಗಳು, ಮನತಣಿಸುವ ಗುಲಾಬಿ, ಆಂಥೋರಿಯಂ ಹೀಗೆ ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟು ಹಲವು ವೈಶಿಷ್ಟ್ಯತೆಯಿಂದ ಕೂಡಿದ ರಾಷ್ಟ್ತ್ರೀಯ, ಅಂತರರಾಷ್ಟ್ತ್ರೀಯ ಉದ್ಯಾನವನಗಳಲ್ಲಷ್ಟೇ ಕಾಣಬಹುದಾದಂತಹ ಪುಷ್ಪಗಳು ಇಲ್ಲಿ ಅರಳಿ ನಮ್ಮನ್ನು ವಿಸ್ಮಯಗೊಳಿಸುತ್ತವೆ.