Select Your Language

Notifications

webdunia
webdunia
webdunia
webdunia

ಐತಿಹಾಸಿಕ ಶಾಸನ, ದೇಗುಲಗಳಿರುವ ಪ್ರವಾಸಿ ತಾಣ ಲಕ್ಕುಂಡಿ

ಐತಿಹಾಸಿಕ ಶಾಸನ, ದೇಗುಲಗಳಿರುವ ಪ್ರವಾಸಿ ತಾಣ ಲಕ್ಕುಂಡಿ
, ಗುರುವಾರ, 31 ಜನವರಿ 2013 (17:46 IST)
PR
ಗದಗ್‌ನಿಂದ ಆಗ್ನೇಯಕ್ಕೆ 12 ಕಿಲೋ ಮೀಟರ್‌ ಕ್ರಮಿಸಿ ಸ್ವಲ್ಪ ಎಡಕ್ಕೆ ತಿರುಗಿದರೆ ತೆಂಗು ಬಾಳೆ ತಲೆದೂಗುವ ಲಕ್ಕುಂಡಿ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಇತಿಹಾಸದ ಕಾಲದಲ್ಲಿ ಲೊಕ್ಕಿಯ ಗುಂಡಿ ಎಂದು ಪ್ರಸಿದ್ದವಾದ ಈ ಊರು ಕಲ್ಯಾಣದ ಚಾಲುಕ್ಯರ, ಸೆವುಣರು, ದೇವಗಿರಿ ಯಾದವರ ಕಾಲದಿಂದ ಮೆರೆದಿತ್ತು ಲೊಕ್ಕಿ ಎಂಬುದು ಒಂದು ಬಗೆಯ ಸಸ್ಯವನ್ನೂ ಗುಂಡಿ ಎಂಬುದು ತಗ್ಗಾದ ಪ್ರದೇಶವನ್ನೂ ಸೂಚಿಸುತ್ತದೆ.

ಲಕ್ಕುಂಡಿಯನ್ನು ಶಾಸನಗಳ ಊರು ಎಂದರೆ ತಪ್ಪಾಗಲಾರದು. ಇಲ್ಲಿ 11-12ನೇ ಶತಮಾನಕ್ಕೆ ಸೇರಿದ ದೇಗುಲಗಳು ಹಾಗೂ ಶಾಸನಗಳು ನಾಡಿನ ಗತ ವೈಭವದ ಮೇಲೆ ಬೆಳಕು ಚೆಲ್ಲುತ್ತವೆ. ಶಾಸನಗಳಲ್ಲಿ ಬ್ರಹ್ಮನು ಅಮರಾವತಿ ಮತ್ತು ಲಕ್ಕುಂಡಿಯಲ್ಲಿ ಯಾವುದು ಶ್ರೇಷ್ಠ ಎಂದು ಪರೀಕ್ಷಿಸಿದಾಗ ಅಮರಾವತಿ ಹಗುರವಾಗಿದ್ದು, ಮೇಲೆ ಹೋಯಿತಂತೆ. ಭಾರವಾಗಿದ್ದ ಲಕ್ಕುಂಡಿಯು ಭೂಮಿಯ ಮೇಲೆ ಉಳಿಯಿತಂತೆ! ಅಮರಾವತಿಗಿಂತ ಲಕ್ಕುಂಡಿ ಹೆಚ್ಚು ತೂಕವುಳ್ಳದ್ದು ಹಾಗೂ ಶ್ರೇಷ್ಠವಾದದ್ದು ಎಂಬುದು ಶಾಸನದ ಸಾರ.

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಟಂಕಸಾಲೆ ಆಗಿತ್ತು. ಇಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸುತ್ತಿದ್ದರು. ಇಲ್ಲಿನ ಬಹುತೇಕ ಶಾಸನಗಳಲ್ಲಿ ಲೊಕ್ಕಿಯಂಪೊಗಂದ್ಯಾಣ(ಲಕ್ಕುಂಡಿಯ ಬಂಗಾರದ ನಾಣ್ಯ) ಬಗ್ಗೆ ಪ್ರಸ್ತಾಪವಿದೆ. ಲಕ್ಕುಂಡಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಉಪರಾಜಧಾನಿ ಆಗಿತ್ತು.

ಲಕ್ಕುಂಡಿ ಪ್ರಾಚೀನ ಗುಡಿಗಳ ಬೀಡು. ಇಲ್ಲಿ 101 ಗುಡಿಗಳು ಇದ್ದವು ಎಂದು ಪ್ರಾಚೀನ ಶಾಸನಗಳಿಂದ ತಿಳಿದುಬರುತ್ತದೆ. ಈಗಲೂ ಇಲ್ಲಿ 50ಕ್ಕೂ ಹೆಚ್ಚು ದೇಗುಲಗಳಿದ್ದರೂ ಸುಸ್ಥಿತಿಯಲ್ಲಿರುವುದು ಕೆಲವು ಮಾತ್ರ.

ಲಕ್ಕುಂಡಿಯಲ್ಲಿ ಮೊದಲು ನಮಗೆ ಎದುರಾಗುವುದು ಬ್ರಹ್ಮಜಿನಾಲಯ. ಇಲ್ಲಿನ ದೇವಾಲಯಗಳಲ್ಲೇ ಅತೀ ಪ್ರಾಚೀನವಾದುದು. ಕವಿ ರನ್ನನಿಗೆ ಆಶ್ರಯ ನೀಡಿದ್ದ ದಾನ ಚಿಂತಾಮಣಿ ಅತ್ತಿಮಬ್ಬೆ, 11ನೇ ಶತಮಾನದಲ್ಲಿ ಈ ಬಸದಿಯನ್ನು ಕಟ್ಟಿಸಿ ಸಾವಿರದ ಐನೂರು ಮುತ್ತು ರತ್ನ ಖಚಿತ ಜಿನ ಬಿಂಬಗಳನ್ನು ದಾನ ಮಾಡಿದ್ದಳು. ಜೊತೆಗೆ ಈ ಜಿನಾಲಯಕ್ಕೆ ದತ್ತಿ ಬಿಡುವಂತೆ ಕಲ್ಯಾಣ ಚಾಲುಕ್ಯ ದೊರೆ ಇರಿವಬೆಡಂಗ ಸತ್ಯಾಶ್ರಯ ನಲ್ಲಿ ವಿನಂತಿಸಿಕೊಂಡಿದ್ದರು ಎಂದು ಶಾಸನಗಳಿಂದ ತಿಳಿದು ಬರುತ್ತದೆ.

ಜೈನ ಬಸದಿಯಿಂದ ಸ್ವಲ್ಪ ದೂರ ಇರುವ ಕಾಶಿ ವಿಶ್ವನಾಥ ದೇವಾಲಯ ಶಿಲ್ಪ ಕಲೆ ದೃಷ್ಟಿಯಿಂದ ಉತ್ಕೃಷ್ಠವಾಗಿದೆ. ಗರ್ಭಗುಡಿಯ ಮುಂದಿನ ಪಡಸಾಲೆಯ ತೊಲೆಯ ಕಂಬದಲ್ಲಿ ಇಮ್ಮಡಿ ತೈಲಪನ ಎರಡು ಶಾಸನಗಳಿವೆ. ಕಲ್ಯಾಣ ಚಾಲುಕ್ಯರ ವಾಸ್ತು ವೈಭವವನ್ನು ಈ ದೇಗುಲದಲ್ಲಿ ಕಾಣಬಹುದು ಅಮೋಘ ಚಿತ್ರಪಟ್ಟಿಕೆ ಹಾಗೂ ಬಳ್ಳಿಗಳನ್ನು ವಿವರವಾಗಿ ಬಿಡಿಸಿದ ಉನ್ನತ ಶಿಲ್ಪ ಕಲೆಯಿಂದ ದೇವಾಲಯದ ಪ್ರವೇಶ ದ್ವಾರ ನೋಡುಗರನ್ನು ಬೆರಗುಗೊಳಿಸುತ್ತದೆ.

ಕಾಶಿ ವಿಶ್ವನಾಥ ದೇಗುಲದ ಹಿಂಭಾಗದಲ್ಲಿ ಎತ್ತರವಾದ ಜಗತಿಯ ಮೇಲೆ ನನ್ನೇಶ್ವರ ದೇವಾಲಯವಿದೆ. ಈದೇವಾಲಯದ ಮುಖ ಮಂಟಪದ ಕಂಬಗಳು ಬಹಳ ಆಕರ್ಷಕವಾಗಿವೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಮಲ್ಲಿಕಾರ್ಜುನ, ವಿರೂಪಾಕ್ಷ, ಲಕ್ಷ್ಮೀ ನಾರಾಯಣ, ಸೋಮೇಶ್ವರ, ವೀರಭದ್ರ, ಚಂದ್ರಮೌಳೀಶ್ವರ, ನೀಲಕಂಠೇಶ್ವರ ಮೊದಲಾದ ದೇವಾಲಯಗಳಿವೆ.

ಸೋಪಾನ ಬಾವಿಗಳು: 800 ವರ್ಷಗಳ ಹಿಂದಿನ ಸೋಪಾನ ಬಾವಿಗಳು ಇನ್ನೊಂದು ಮುಖ್ಯ ಆಕರ್ಷಣೆ. ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಈ ಬಾವಿಗಳು ಪ್ರಸಿದ್ದವಾಗಿವೆ. ಛಟೀರ ಬಾವಿ, ಮುಸುಕಿನ ಬಾವಿ ಮೊದಲಾದವು ಅತ್ಯಾಕರ್ಷಕವಾಗಿವೆ.

ಚೌಕಾಕಾರ ಇಲ್ಲವೇ ಆಯತಾಕಾರವಾಗಿರುವ ಈ ಬಾವಿಗಳ ತಳಭಾಗದಿಂದ ಮೇಲ್ಭಾಗದ ವರೆಗೆ ಬಂದತೆಲ್ಲಾ ವಿನ್ಯಾಸ ಬದಲಾಗುತ್ತಾ ಹೋಗುತ್ತದೆ.

ಬಾವಿಯ ಗೋಡೆಗಳಲ್ಲಿ ಪುಟ್ಟ ಗೋಡೆಗಳನ್ನು ಹೊಂದಿರುವ ದೇವ ಕೋಷ್ಠಕಗಳಿದ್ದು, ಅವುಗಳಲ್ಲಿ ಈಗ ಯಾವುದೇ ಮೂರ್ತಿಗಳು ಕಂಡು ಬರುವುದಿಲ್ಲ. ಬಾವಿಗೆ ಸುಂದರವಾದ ಮೆಟ್ಟಿಲುಗಳಿದ್ದು, ಬಾವಿಯ ಒಳಗೆ ಇಳಿದರೆ ಉರಿಯುವ ಬಿಸಿಲಿನಲ್ಲೂ ಮೈ ತಂಪಾಗುತ್ತದೆ. ಇಂದಿಗೂ ಉಪಯೋಗದಲ್ಲಿರುವ ಈ ಬಾವಿಗಳಿಗೆ ಪಂಪ್‌ಸೆಟ್‌ ಅಳವಡಿಸಲಾಗಿದೆ.

ನೂರೊಂದು ಗುಡಿಗಳ ಲಕ್ಕುಂಡಿ
ಬ್ರಹ್ಮ ಜಿನಾಲಯದ ಬಳಿ ಪ್ರಾಚ್ಯ ವಸ್ತು ಇಲಾಖೆಯ ವಸ್ತು ಸಂಗ್ರಹಾಲಯವಿದೆ. ಇದರಲ್ಲಿ ತೀರ್ಥಂಕರ, ಸೂರ್ಯದೇವ, ಯಕ್ಷ, ಕಾರ್ತಿಕೇಯ, ವಿಷ್ಣು, ಲಜ್ಜಾಗೌರಿ ಮೊದಲಾದ ವಿಗ್ರಹಗಳನ್ನು ಸಂಗ್ರಹಿಸಿಡಲಾಗಿದೆ. ಅಪರೂಪದ ಶಾಸನಗಳನ್ನೂ ಸಂಗ್ರಹಿಸಿಡಲಾಗಿದೆ.

ಗದಗ್‌ನಿಂದ 12 ಕಿಲೋ ಮೀಟರ್‌ ದೂರ ಇರುವ ಲಕ್ಕುಂಡಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನಗಳ ಸೌಲಭ್ಯವಿದೆ. ಗದಗ್‌ನಿಂದ ಟ್ಯಾಕ್ಸಿ ಮಾಡಿಕೊಂಡು ಹೋದರೆ ಹೆಚ್ಚು ಅನುಕೂಲವಾಗುತ್ತದೆ.

ಗದಗ್‌ ಜಿಲ್ಲೆಯ ಇತರೆ ಪ್ರವಾಸಿ ತಾಣಗಳು
ನರೇಗಲ್ಲ: ಗದಗ್‌ನಿಂದ ಈಶಾನ್ಯಕ್ಕೆ 27 ಕಿಲೋ ಮೀಟರ್‌ದೂರದಲ್ಲಿರುವ ನರೇಗಲ್ಲ ಕಲ್ಯಾಣ ಚಾಲುಕ್ಯರ ಶೈಲಿಯನ್ನು ಪ್ರತಿನಿಧಿಸುವ ಸೋಮೇಶ್ವರ, ತ್ರಿಪುರಾಂತಕೇಶ್ವರ, ಕಲ್ಲೇಶ್ವರ, ಚಂದ್ರಮೌಳೀಶ್ವರ, ಮೊದಲಾದ ಸುಂದರ ದೇವಾಲಯಗಳನ್ನು ಹೊಂದಿದೆ. ಈ ಪೈಕಿ ಸೋಮೇಶ್ವರ ದೇವಾಲಯದ ಗಾತ್ರದಲ್ಲೂ, ಸೌಂದರ್ಯದಲ್ಲೂ ಮಹತ್ವದ್ದಾಗಿದೆ. ಗೋಲ ಗುಮ್ಮಟದ ಮಾದರಿಯ ಒಂದು ದರ್ಗಾ ಇದೆ.

ಡಂಬಳ: ಗದಗ್‌ನಿಂದ ಆಗ್ನೇಯಕ್ಕೆ 20 ಕಿಲೋ ಮೀಟರ್‌ ದೂರದಲ್ಲಿ ಮುಂಡರಗಿ ತಾಲೂಕಿನಲ್ಲಿದೆ,ಇಲ್ಲಿ ಕೆಲವು ಪ್ರಾಚೀನ ದೇವಾಲಯಗಳಿವೆ. 11-12ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಒಂದು ವಿಶೇಷವಾದ ರಚನೆಯಾಗಿದೆ. ತಳವಿನ್ಯಾಸ ಮತ್ತು ಗೋಪುರದ ಭಾಗಗಳನ್ನು ಹಂತ ಹಂತವಾಗಿ ನಿರ್ಮಿಸಲಾಗಿದ್ದು, ಈ ದೇವಾಲಯದ ಗರ್ಭಗೃಹ ಅರ್ಧ ಮಂಟಪ ಹಾಗೂ ಎರಡೂ ಮುಖ ಮಂಟಪಗನ್ನು ಹೊಂದಿದೆ.

ಗಜೇಂದ್ರಗಢ : ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ರೋಣ ತಾಲೂಕಿನಲ್ಲಿ ರೋಣ- ಕುಷ್ಟಗಿ ಹೆದ್ದಾರಿಯಲ್ಲಿ ಇವೆರಡಕ್ಕೂ ಸಮಾನ ಅಂತರದಲ್ಲಿದೆ. ಇಲ್ಲಿ ಬೆಟ್ಟದ ಮೇಲೆ ಛತ್ರಪತಿ ಶಿವಾಜಿ ಕಟ್ಟಿಸಿದ ಗಜೇಂದ್ರ ಗಢ ಕೋಟೆ ಇದೆ. ಕೋಟೆಯ ಒಳ ಭಾಗದಲ್ಲಿ ಮದ್ದಿನ ಮನೆ ಹಾಗೂ ಕೊಳಗಳಿವೆ. ಇಲ್ಲಿ ಕೆಲವು ತೀರ್ಥಗಳು ಹಾಗೂ ಗವಿಗಳಿವೆ.

Share this Story:

Follow Webdunia kannada