ಹರಿಹರ ಜೆಡಿಎಸ್ ಮುಖಂಡ ಕೊಂಡಜ್ಜಿ ವಿಜಯ ಕುಮಾರ್ ಸಾವು ಯಾವುದೇ ಹಲ್ಲೆಯಿಂದ ಸಂಭವಿಸಿಲ್ಲ, ಆ ಸಾವು ಹೃದಯಾಘಾತದಿಂದ ಆಗಿರುವುದಾಗಿ ಶಿವಮೊಗ್ಗ, ಹುಬ್ಬಳ್ಳಿ ವೈದ್ಯರು ನೀಡಿರುವ ಮರಣೋತ್ತರ ವರದಿ ಖಚಿತಪಡಿಸಿದೆ.
ಕಳೆದ ಏಪ್ರಿಲ್ 30ರಂದು ಲೋಕಸಭಾ ಚುನಾವಣೆ ಮುಗಿದು ನಂತರ ಹರಿಹರದ ಜೈಭೀಮ್ ನಗರ ಮತಗಟ್ಟೆ ಸಮೀಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಜೆಡಿಎಸ್ ಬೆಂಬಲಿಗರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಘರ್ಷಣೆಯಲ್ಲಿ ಕೊಂಡಜ್ಜಿ ವಿಜಯ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬದ ಸದಸ್ಯರು, ಜೆಡಿಎಸ್ ಮುಖಂಡರು ಆರೋಪಿಸಿದ್ದರು.
ಕೊಂಡಜ್ಜಿ ಅವರ ಶವಪರೀಕ್ಷೆಯನ್ನು ಸ್ಥಳೀಯ ವೈದ್ಯರು ತಮ್ಮ ಅನುಮತಿ ಇಲ್ಲದೆ ನಡೆಸಿದ್ದು ಅನುಮಾನಕ್ಕೆ ಕಾರಣವಾಗಿದೆ ಎಂಬುದಾಗಿ ಮೃತರ ಕುಟುಂಬ, ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಪುನಃ ಶವ ಪರೀಕ್ಷೆ ಜವಾಬ್ದಾರಿಯನ್ನು ಪ್ರತ್ಯೇಕವಾಗಿ ಶಿವಮೊಗ್ಗ, ಹುಬ್ಬಳ್ಳಿ ವೈದ್ಯರಿಗೆ ವಹಿಸಲಾಗಿತ್ತು.