Select Your Language

Notifications

webdunia
webdunia
webdunia
webdunia

ಮೈಸೂರು ಕೋಮುದಳ್ಳುರಿ: ಮತ್ತೆ ಮೂವರಿಗೆ ಇರಿತ

ಮೈಸೂರು ಕೋಮುದಳ್ಳುರಿ: ಮತ್ತೆ ಮೂವರಿಗೆ ಇರಿತ
ಮೈಸೂರು , ಶುಕ್ರವಾರ, 3 ಜುಲೈ 2009 (14:59 IST)
ಮೈಸೂರು: ಕ್ಯಾತನಮಾರನಹಳ್ಳಿ, ಉದಯಗಿರಿಯಲ್ಲಿ ಭುಗಿಲೆದ್ದ ಕೋಮುಗಲಭೆಗೆ ಮೂರು ಮಂದಿ ಸಾವನ್ನಪ್ಪಿದ್ದು, ಮತ್ತೆ ಮೂರು ಮಂದಿ ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಬೆಳಿಗ್ಗೆ ಸಿಆರ್‌ಪಿಎಫ್, ಆರ್‌ಎಪಿ ಪಥಸಂಚಲನ ನಡೆಸಿದೆ. ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೈಕ್‌ನಲ್ಲಿ ಆಗಮಿಸಿದ್ದ ಶಸ್ತ್ರ ಸಜ್ಜಿತ ಮಂದಿ, ಮೂರು ಮಂದಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಸ್ಥಿತಿ ಶಾಂತ: ಕೋಮುದಳ್ಳುರಿಯಿಂದ ತತ್ತರಿಸಿದ್ದ ಕ್ಯಾತಮಾರನಹಳ್ಳಿ, ಉದಯಗಿರಿ ಪ್ರದೇಶಗಳಲ್ಲಿನ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಗುರುವಾರ ಉದಯಗಿರಿ ಎಂಬಲ್ಲಿ ಮಸೀದಿ ಕಟ್ಟುವ ನಿವೇಶನಕ್ಕೆ ಸಂಬಂಧಿಸಿದಂತೆ ಕೋಮುಗಳ ನಡುವೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಇರಿತದಿಂದ ಇಬ್ಬರು, ಪೊಲೀಸ್ ಗೋಲಿಬಾರ್‌‌ಗೆ ಒಬ್ಬ ಬಲಿಯಾದ ಘಟನೆ ಗುರುವಾರ ನಡೆದಿತ್ತು.

ಮುನ್ನೆಚ್ಚರಿಕೆಯ ಅಂಗವಾಗಿ ಘರ್ಷಣೆ ಪೀಡಿತ ಪ್ರದೇಶಗಳಾದ ಕ್ಯಾತಮಾರನಹಳ್ಳಿ, ಉದಯಗಿರಿ, ಶಾಂತಿನಗರ ಹಾಗೂ ಇಂದಿರಾಗಾಂಧಿ ರಸ್ತೆಗಳಲ್ಲಿ ಕೇಂದ್ರ ಮೀಸಲು ಪಡೆ, ಆರ್‌ಪಿಎಫ್ ಇಂದು ಬೆಳಿಗ್ಗೆ ಪಥಸಂಚಲನ ನಡೆಸಿದೆ. ಹೆಚ್ಚುವರಿ ಪೊಲೀಸ್ ಪಡೆ, ಸಿಆರ್‌ಪಿಎಫ್ ಅನ್ನು ನಿಯೋಜಿಸಲಾಗಿದ್ದು, ಗಲಭೆ ಪೀಡಿತ ಪ್ರದೇಶ ಇದೀಗ ಯಥಾಸ್ಥಿತಿಗೆ ಮರಳುತ್ತಿದೆ ಎಂದು ಜಿಲ್ಲಾಧಿಕಾರಿ ಮಣಿವಣ್ಣನ್ ತಿಳಿಸಿದ್ದಾರೆ.


ಘಟನೆ ವಿವರ: ಗಾಯತ್ರಿಪುರಂನ 2ನೇ ಹಂತದಲ್ಲಿ ಈ ಹಿಂದೆ ಒಂದು ಮನೆ ಇತ್ತು. ಆ ಮನೆಯ ಜಾಗದಲ್ಲಿ ಆಲಂ ಶಾಹೀದ್ ಟ್ರಸ್ಟ್‌ನವರು ಅರೇಬಿಕ್ ಶಾಲೆಯನ್ನು ನಡೆಸುತ್ತಿದ್ದರು. ಆ ಶಾಲೆ ಕಳೆದ ಒಂದು ವರ್ಷದ ಹಿಂದೆ ಮುಚ್ಚಿಹೋಗಿತ್ತು. ಆ ಜಾಗದಲ್ಲಿದ್ದ ಮನೆ ತೆರವು ಮಾಡಿ ಕಳೆದ ನಾಲ್ಕು ತಿಂಗಳ ಹಿಂದೆ ಆ ಜಾಗದ ಸುತ್ತ ತಡೆಗೋಡೆ ನಿರ್ಮಿಸಿ ಮಸೀದಿ ಕಟ್ಟಲು ಪಿಲ್ಲರ್‌ಗಳನ್ನು ಹಾಕಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿಯಮ್ಮ ದೇವಸ್ಥಾನ ಟ್ರಸ್ಟ್‌ನವರು ಆ ನಿವೇಶನದಲ್ಲಿ ಮಸೀದಿ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಇಂದು ಮುಂಜಾನೆ ಕಿಡಿಗೇಡಿಗಳು ಹಂದಿಯೊಂದನ್ನು ಕಡಿದು, ಮಸೀದಿ ಕಟ್ಟುತ್ತಿರುವ ಜಾಗದ ಮುಂಭಾಗದಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಮುಸ್ಲಿಮರು ಗಲಾಟೆ ಆರಂಭಿಸಿದ್ದರು. ಗಲಭೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರು.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ: ನಿರ್ಮಾಣ ಹಂತದಲ್ಲಿ ಪ್ರಾರ್ಥನಾ ಮಂದಿರದ ಆವರಣವನ್ನು ಅಪವಿತ್ರಗೊಳಿಸಿದರೆಂಬ ಕಾರಣಕ್ಕಾಗಿ ಮೈಸೂರಿನಲ್ಲಿ ನಡೆದ ಕೋಮುಗಲಭೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಈ ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಸೂಕ್ತ ಪರಿಹಾರವನ್ನು ಕೂಡಲೇ ಘೋಷಣೆ ಮಾಡಬೇಕೆಂದು ತಿಳಿಸಿದ್ದಾರೆ.

ಕೋಮುಗಲಭೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಘಟನೆಯ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದೇ ವೇಳೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ವಿ.ಎಸ್. ಆಚಾರ್ಯ, ಪೊಲೀಸರು ಗುಂಪನ್ನು ಚದುರಿಸುವ ನಿಟ್ಟಿನಲ್ಲಿ ರಬ್ಬರ್ ಗುಂಡು ಹಾರಿಸಿದ್ದಾರೆ ವಿನಃ ಸಾರ್ವಜನಿಕರ ಮೇಲೆ ಗುಂಡು ಹಾರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada