Publish Date: Thu, 28 Feb 2019 (13:57 IST)
Updated Date: Thu, 28 Feb 2019 (13:59 IST)
ಬೆಂಗಳೂರು : ಉಗ್ರರ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್ ನಲ್ಲೂ ರಾಜಕೀಯ ಲೆಕ್ಕಾಚಾರ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸಂಶಯಾಸ್ಪದ ಹೇಳಿಕೆಯ ಬಗ್ಗೆ ಪ್ರಧಾನಿ ಮೋದಿಯವರು ಸ್ಪಷ್ಟೀಕರಣ ನೀಡಬೇಕು ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಬುಧವಾರ ಚಿತ್ರದುರ್ಗದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು,’ ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ’ ಎಂದು ಹೇಳಿದ್ದಾರೆ.
ಬಿಎಸ್‍ವೈ ಈ ಹೇಳಿಕೆಯ ಸಮೇತ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸಾವಿನಲ್ಲಿ ರಾಜಕೀಯ ಲಾಭ ಕಾಣುತ್ತಿರುವ ಬಿಎಸ್‍ವೈ ಅವರ ಹೇಳಿಕೆ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಉದ್ದೇಶದ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿ ಈ ಟ್ವೀಟನ್ನು ಯಡಿಯೂರಪ್ಪ, ಬಿಜೆಪಿ ಇಂಡಿಯಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.