ಬೆಂಗಳೂರು: ನಮ್ಮ ತಂದೆಗೂ ಮುಡಾ ಹಗರಣಕ್ಕೂ ಸಂಬಂಧವಿಲ್ಲ. ಆದರೂ ಸುಮ್ ಸುಮ್ನೇ ಇಡಿ ತಂದೆಯವರನ್ನು ಪ್ರಕರಣದಲ್ಲಿ ಎಳೆದು ತರ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆಯಲ್ಲಿ ಸಿದ್ದರಾಮಯ್ಯ ಮತ್ತು ಪತ್ನಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎನ್ನಲಾಗಿದೆ. ಆದರೆ ಇಡಿ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಹೆಸರು ಉಲ್ಲೇಖಿಸಿತ್ತು. ಆದರೆ ಸಿಎಂ ಪತ್ನಿ ವಿಚಾರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ಆದರೆ ಇದೀಗ ಮುಡಾದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿದೆ.
ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ನನ್ನ ತಂದೆಯ ಹೆಸರನ್ನು ಸುಖಾ ಸುಮ್ಮನೇ ಎಳೆದು ತರಲಾಗುತ್ತಿದೆ. ಇಡಿ ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ನಮ್ಮ ತಂದೆಯವರನ್ನು ಹೇಗಾದರೂ ಪ್ರಕರಣದಲ್ಲಿ ಸಿಲುಕಿಸಲು ಇಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.
ಮುಡಾ ಹಗರಣದಲ್ಲಿ ನನ್ನ ತಂದೆಯವರು ಅಮಾಯಕ. ನಮ್ಮ ಜಮೀನನ್ನು ಮುಡಾ ಅನಧಿಕೃತವಾಗಿ ವಶಪಡಿಸಿಕೊಂಡಿತ್ತು. ಅದಕ್ಕೆ ಬದಲಿಯಾಗಿ ಮತ್ತೊಂದು ನಿವೇಶನ ಕೊಟ್ಟಿತ್ತು. ಭೂಸ್ವಾದೀನಪಡಿಸಿಕೊಂಡ ರೈತರಿಗೆ ಬದಲಿ ನಿವೇಶನ ಕೊಟ್ಟಿದ್ದಾರೆ. ಮುಡಾ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ನಮ್ಮ ತಂದೆಯ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ.