Publish Date: Tue, 11 Aug 2026 (18:38 IST)
Updated Date: Tue, 11 Aug 2026 (18:41 IST)
ಬೆಂಗಳೂರು: ಅಧಿವೇಶನ ನಡೆಸುವ ಹೊಣೆ ಇದ್ದಲ್ಲಿ ಮೊದಲು ನಾಗೇಂದ್ರ ಅವರ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಒತ್ತಾಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್, ಕೆಪಿಎಸ್‌ಸಿ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಆದರೆ ಚರ್ಚೆಯಾಗಬೇಕೆಂದರೆ ಮೊದಲು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸದನದಲ್ಲಿ ಎಲ್ಲದಕ್ಕೂ ಮುಖ್ಯಮಂತ್ರಿಯೇ ಉತ್ತರ ಕೊಡುವುದಾದರೆ ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಜನರ ತೆರಿಗೆ ಹಣದಲ್ಲಿ ಸಚಿವರಿಗೆ ಕಾರು, ಮನೆ ಎಲ್ಲವನ್ನೂ ನೀಡುತ್ತಾರೆ. ಇದು ಚಕ್ರಾಧಿಪತ್ಯ ಅಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಗೌರವ ನೀಡುವುದಾದರೆ ಸಚಿವರಿಗೆ, ಮುಖ್ಯಮಂತ್ರಿಗೆ ಯಾವ ಅಧಿಕಾರ ಇದೆ ಎಂದು ತಿಳಿದುಕೊಳ್ಳಬೇಕು. ಮುಖ್ಯಮಂತ್ರಿಯೇ ಉತ್ತರ ಕೊಡುವುದಾದರೆ ಎಲ್ಲ ಸಚಿವರನ್ನು ಅಧಿವೇಶನದಿಂದ ಹೊರಕ್ಕೆ ಹಾಕಬೇಕು. ಈಗ ಇರುವುದು ಡಿಕೆ ಶಿವಕುಮಾರ್ ಅವರ ಗೂಂಡಾ ಸರ್ಕಾರ ಎಂದು ಕಿಡಿಕಾರಿದರು.
ಬಿಜೆಪಿ ವತಿಯಿಂದ ಎಲ್ಲ ಜಿಲ್ಲಾಕೇಂದ್ರಗಳಿಂದ ಹೋರಾಟ ಆರಂಭಿಸಲಾಗುತ್ತಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ವಿಧಾನಸಭೆ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು. ಕಳೆದ ಬಾರಿ ಸಚಿವ ಬಿ.ನಾಗೇಂದ್ರ ಅವರನ್ನು ಕಿತ್ತುಹಾಕಿದ್ದು ಏಕೆ ಹಾಗೂ ಈಗ ಮರಳಿ ಸಚಿವರಾಗಿದ್ದು ಏಕೆ ಎಂದು ಸ್ಪಷ್ಟನೆ ನೀಡಬೇಕೆಂದು ಒತ್ತಾಯ ಮಾಡಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ