ಬೆಂಗಳೂರು (ಆ.08): ಖಾತೆ ಹಂಚಿಕೆ ಬೆನ್ನಲ್ಲೇ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಅಸಮಾಧಾನವಾಗಿದೆಯಂತೆ. ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರು ತಾವಾಗಿದ್ದರೂ ತಮಗೆ ಹಿಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡದೆ ಇದ್ದುದಕ್ಕೆ ಬೇಸರಗೊಂಡಿದ್ದು, ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಅವರಿಗೆ ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ತಾವೊಬ್ಬ ಮಹಿಳೆಯಾಗಿದ್ದರೂ ಮಹಿಳಾ ಮತ್ತು ಮಕ್ಕಳ ಖಾತೆ ನೀಡಿಲ್ಲ. ಯಾರೋ ಕೆಲವರು ನಡೆಸಿದ ಷಡ್ಯಂತ್ರ ಪರಿಣಾಮ ತಮ್ಮ ಖಾತೆ ಬದಲಿಸಲಾಗಿದೆ. ಇದೊಂದು ಸೂಕ್ಷ್ಮ ಇಲಾಖೆ. ಇದನ್ನು ಪುರುಷರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವರ್ಷಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆ. ಇನ್ನೂ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದೆ. ಆದರೆ, ಈಗ ಆ ಖಾತೆ ಬದಲಾಯಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.