ಹುಬ್ಬಳ್ಳಿ: ನಾಳೆಯಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ನಾಲ್ಕು ದಿನ ಮೀಸಲಿಡಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 10 ಮತ್ತು 11 ಹಾಗೂ ಡಿ. 17 ಮತ್ತು 18ರಂದು ಕೃಷ್ಣಾ ಮೇಲ್ದಂಡೆ, ಮಹದಾಯಿ–ಕಳಸಾ–ಬಂಡೂರಿ, ತುಂಗ ಭದ್ರಾ, ಕಾರಂಜಾ, ಕೃಷಿ, ಅರಣ್ಯಭೂಮಿ ಅತಿಕ್ರಮಣದಾರರು ಮತ್ತು ಸಂತ್ರಸ್ತರ ಸಮಸ್ಯೆ, ಸಕ್ಕರೆ ಕಾರ್ಖಾನೆ, ತೋಟಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಸ್ತ್ರತ ಚರ್ಚೆ ನಡೆಯಲಿದೆ ಎಂದರು.
ಈಗಾಗಲೇ ಚರ್ಚೆ ನಡೆಸಬೇಕಾದ ವಿಷಯಗಳ ಕುರಿತು ವಿಷಯಪಟ್ಟಿ ಸಿದ್ಧಪಡಿಸಲಾಗಿದೆ. ಶೂನ್ಯವೇಳೆ (ಮಧ್ಯಾಹ್ನ 3.30) ನಂತರ ಈ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ರಾತ್ರಿ 10 ಗಂಟೆಯಾದರೂ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದೇನೆ.
ಈ ಕುರಿತು ವಿರೋಧಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಮಂಗಳವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದು, ಅಲ್ಲಿಯೂ ತಿಳಿಸುತ್ತೇನೆ. ಈ ಬಾರಿಯ ಅಧಿವೇಶನದ ಕಲಾಪಗಳು ಉತ್ತಮ ರೀತಿಯಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.