ಮಂಗಳೂರು: ಇಲ್ಲಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ದರೋಡೆಕೋರರು ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡುವ ದಿನವನ್ನೇ ಇದಕ್ಕೆ ಆಯ್ಕೆ ಮಾಡಿಕೊಂಡಿರುವುದೇಕೆ?
ಸಿಎಂ ಸಿದ್ದರಾಮಯ್ಯ ನಿನ್ನೆ ಮಂಗಳೂರಿಗೆ ಭೇಟಿ ನೀಡಿರುವ ಸಂದರ್ಭದಲ್ಲೇ ಉಳ್ಳಾಲ ಸಹಕಾರಿ ಬ್ಯಾಂಕ್ ನಲ್ಲಿ ದರೋಡೆ ನಡೆದಿತ್ತು. ಸಿನಿಮೀಯ ರೀತಿಯಲ್ಲಿ ಮಾಸ್ಕ್ ಹಾಕಿಕೊಂಡು ಬ್ಯಾಂಕ್ ಗೆ ನುಗ್ಗಿದ ಐವರ ಗುಂಪು ಚೀಲಗಳಲ್ಲಿ ಸಿಕ್ಕ ಸಿಕ್ಕಂತೆ ದುಡ್ಡು, ಚಿನ್ನ ಹೊತ್ತು ಕಾರಿನಲ್ಲಿ ಪರಾರಿಯಾಗಿದ್ದರು.
ನಗರದಲ್ಲಿ ಸಿಎಂ ಬರುವ ಹೊತ್ತಿನಲ್ಲೇ ಬೇಕೆಂದೇ ಪ್ಲ್ಯಾನ್ ಮಾಡಿ ಕಳ್ಳರು ಈ ಕೃತ್ಯವೆಸಗಿದ್ದಾರೆ. ಸಿಎಂ ಬರುವ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸರು ಅವರ ಭದ್ರತೆಗೆ ಮಂಗಳೂರಿಗೆ ತೆರಳಿದ್ದರು. ಹೀಗಾಗಿ ಈ ಸಮಯದಲ್ಲಿ ಉಳ್ಳಾಲದಲ್ಲಿ ಅಷ್ಟೊಂದು ಪೊಲೀಸರು ಇರಲ್ಲ ಎಂದು ದರೋಡೆಕೋರರು ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು.
ಬ್ಯಾಂಕ್ ನಲ್ಲಿದ್ದ ಸಿಬ್ಬಂದಿಯನ್ನು ಬೆದರಿಸಿ ಸ್ಟ್ರಾಂಗ್ ರೂಂ ಕೀ ಪಡೆದು 10 ಕೋಟಿ ಮೌಲ್ಯದ ಚಿನ್ನ, ಹಣ ಬಾಚಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕಿರುಚಾಟ ಕೇಳಿ ಕೆಳಗಿನ ಬೇಕರಿಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಬಂದಾಗ ಅವರನ್ನು ಕನ್ನಡದಲ್ಲೇ ಗದರಿಸಿ ಕಳುಹಿಸಿದ್ದಾರೆ. ಬ್ಯಾಂಕ್ ನೊಳಗೆ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಸಿಬ್ಬಂದಿ ಹೇಳಿದ್ದಾರೆ. ಓರ್ವ ಕಾರಿನಲ್ಲೇ ಕುಳಿತಿದ್ದರೆ ನಾಲ್ವರು ಬ್ಯಾಂಕ್ ದರೋಡೆ ಮಾಡಿದ್ದಾರೆ. ಬಳಿಕ ಕೆಸಿ ರೋಡ್-ಮಂಗಳೂರು ರಸ್ತೆಯಲ್ಲಿ ಪರಾರಿಯಾಗಿದ್ದಾರೆ.