ಬೆಂಗಳೂರು: ಬಳ್ಳಾರಿ ಗಣಿ ದಣಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ದೋಸ್ತಿಗೆ ಹುಳಿ ಹಿಂಡಿದವರು ಯಾರು? ಇಂದು ಜನಾರ್ಧನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದರ ಬಗ್ಗೆ ಸುಳಿವು ನೀಡಿದ್ದಾರೆ.
ನಿನ್ನೆ ಬಿಜೆಪಿ ಸಭೆಯಲ್ಲಿ ಶ್ರೀರಾಮುಲು ಬಹಿರಂಗವಾಗಿಯೇ ಜನಾರ್ಧನ ರೆಡ್ಡಿ ವಿರುದ್ಧ ಕೆಂಡ ಕಾರಿದ್ದರು. ಬಿಜೆಪಿ ಬಿಡುವುದಾಗಿಯೂ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇಂದು ಜನಾರ್ಧನ ರೆಡ್ಡಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಮಣಿಸಲು ಡಿಕೆ ಶಿವಕುಮಾರ್ ಹೇಗಾದರೂ ಮಾಡಿ ಶ್ರೀರಾಮುಲುವನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿಗೆ ಪರ್ಯಾಯವಾಗಿ ಶ್ರೀರಾಮುಲುವನ್ನು ಬೆಳೆಸಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ. ಶ್ರೀರಾಮುಲು ಕಾಂಗ್ರೆಸ್ ಗೆ ಹೋಗುವುದಾದರೆ ಹೋಗಲಿ, ಆದರೆ ನನ್ನ ಹೆಸರು ಎಳೆದು ತರುವುದು ಯಾಕೆ ಎಂದು ಜನಾರ್ಧನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಈಗ ಒಂದು ಕಾಲದ ಚಡ್ಡಿ ದೋಸ್ತುಗಳಾಗಿದ್ದ ಜನಾರ್ಧನ ರೆಡ್ಡಿ-ರಾಮುಲು ಜಗಳಕ್ಕೆ ಡಿಕೆಶಿ ಹೆಸರು ಎಂಟ್ರಿಯಾಗಿದೆ.