Publish Date: Fri, 28 Sep 2018 (08:37 IST)
Updated Date: Fri, 28 Sep 2018 (08:40 IST)
ಕೋಲಾರ : ಎರಡನೇ ಪತ್ನಿಯು ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದ ವ್ಯಕ್ತಿಯೊಬ್ಬ ಆಕೆಯ ತಲೆ ಕಡಿದು ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಸದ್ದಾಂ ಹುಸೇನ್ ಅಲಿಯಾಸ್ ಅಜೀಜ್ (27 ವರ್ಷ) ಆರೋಪಿಯಾಗಿದ್ದು, ಬೆಂಗಳೂರಿನ ನೀಲಸಂದ್ರ ನಿವಾಸಿ ರೋಷಿಣಿ ಖಾನಂ ಕೊಲೆಯಾದ ಪತ್ನಿಯಾಗಿದ್ದಾಳೆ. ಮೂಲತಃ ಶ್ರೀನಿವಾಸಪುರ ಪಟ್ಟಣದ ಗಫರ್ ಖಾನ್ ಮೊಹಲ್ಲಾದ ನಿವಾಸಿಯಾಗಿರುವ ಅಜೀಜ್ ಗೆ ತನ್ನ 2ನೇ ಹೆಂಡತಿಯು ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದು ಆಕೆಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ಮಾಡಿ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮುಲ್ಲಕ್ಕೆ ಹೆಂಡತಿಯನ್ನು ಬೈಕಿನಲ್ಲಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಪತ್ನಿ ರೋಷಿಣಿ ಖಾನಂಗೆ ಪ್ರಜ್ಞೆ ತಪ್ಪಿಸಿ ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ನಂತರ ಹೆಂಡತಿಯ ತಲೆಯನ್ನು ತೆಗೆದುಕೊಂಡು ಬಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅಲ್ಲದೆ ಠಾಣೆಯಲ್ಲೇ ಪತ್ನಿಯ ರುಂಡವನ್ನು ಹಿಡಿದು ಕೊಂಡು ಚಿನ್ನಾ, ರನ್ನಾ ಎನ್ನುತ್ತಾ ಮುದ್ದಾಡಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಆತನ ಕೈಯಲಿದ್ದ ಕತ್ತಿ ಹಾಗೂ ಮಹಿಳೆಯ ರುಂಡವನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಪ್ರಕರಣವು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪೊಲೀಸರು ಕೆಂಚಾರಲಹಳ್ಳಿ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆಂಚಾರಲಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.