ಬೆಳಗಾವಿ : 2023ಕ್ಕೆ ಜನರು ಆಶೀರ್ವಾದ ಮಾಡಿದರೆ, ನಾವು ಮತ್ತೆ ಅಧಿಕಾರಕ್ಕೆ ಬಂದರೆ 7 ಕೆಜಿ ಅಲ್ಲ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.
ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಮಾಡಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಹದಿನೈದು ಲಕ್ಷ ಮನೆಗಳನ್ನ ಕಟ್ಟಿಸಿದ್ದೇನೆ.
ಬಸವಣ್ಣನವರ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ಜನರ ಭರವಸೆ ಈಡೇರಿಸಿದ್ದೇನೆ. ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದ್ದೇನೆ. 2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದರೆ 7 ಕೆಜಿ ಅಲ್ಲ ತಲಾ 10 ಕೆಜಿ ಕೊಡುತ್ತೇವೆ ಎಂದರು.
ಕರ್ನಾಟಕದಲ್ಲಿ ಪಿಎಸ್ಐ ನೇಮಕಾತಿಯಲ್ಲಿ 300 ಕೋಟಿ ಹೊಡೆದಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಇರಬೇಕಾ? ಯಾವ ಕಾರಣಕ್ಕೆ ಇರಬೇಕು? ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಬೇರು ಸಹಿತ ಕಿತ್ತು ಒಗೆಯಬೇಕು. ಈ ಸರ್ಕಾರ ಏನೂ ಮಾಡಲ್ಲ.
ಘೇಂಡಾಮೃಗದ ದಪ್ಪ ಚರ್ಮದಂತ ಸರ್ಕಾರ ಇದು. ಇಂತಹ ಕೆಟ್ಟ, ಭ್ರಷ್ಟ, ಜನವಿರೋಧಿ ಸರ್ಕಾರವನ್ನು ನಾನು ಯಾವ ಕಾಲದಲ್ಲೂ ನೋಡಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲಾ ಮಾಡೋಣ.
ನಾವೆಲ್ಲರೂ ದೇಶಭಕ್ತಿ ಮನೋಭಾವ ಬೆಳೆಸಿಕೊಳ್ಳಬೇಕು. ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.