ಕಲಬುರಗಿ: ರೈತರ ಇಂಚು ಜಾಗವನ್ನೂ ಕಬಳಿಕೆ ಮಾಡಲ್ಲ ಎಂದು ಒಂದೆಡೆ ರಾಜ್ಯ ಸರ್ಕಾರ ಹೇಳಿದರೆ ಇನ್ನೊಂದೆಡೆ ವಿಜಯಪುರ, ಧಾರವಾಡದ ಬಳಿಕ ಇದೀಗ ಕಲಬುರಗಿಯ ರೈತರಿಗೂ ವಕ್ಫ್ ಆಸ್ತಿ ನೋಟಿಸ್ ಬಿಸಿ ತಟ್ಟಿದೆ.
ನಿನ್ನೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ರೈತರನ್ನು ಒಕ್ಕಲ್ಲೆಬ್ಬಿಸುವ ಉದ್ದೇಶ ನಮಗಿಲ್ಲ. ರೈತರ ಜಮೀನಿಗೆ ವಕ್ಫ ನೋಟಿಸ್ ಬಂದರೆ ಸರಿಪಡಿಸಲಾಗುವುದು ಎಂದಿದ್ದರು. ಆದರೆ ಇದರ ಬೆನ್ನಲ್ಲೇ ಈಗ ಕಲಬುರಗಿಯಲ್ಲೂ ರೈತರ ಜಮೀನುಗಳಿಗೆ ವಕ್ಫ್ ನೋಟಿಸ್ ಬಂದಿರುವುದು ಬೆಳಕಿಗೆ ಬಂದಿದೆ.
ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿ ಜಿಲ್ಲೆಯ 45 ಕ್ಕೂ ಹೆಚ್ಚು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ಬಂದಿದೆ. ಚಿಂಚೋಳಿ ತಾಲೂಕಿನ 45 ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ನೋಟಿಸ್ ನೋಡಿ ರೈತರು ದಿಕ್ಕೇ ತೋಚದಂತಾಗಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂ. ಕೊಟ್ಟು ಜಮೀನು ಖರೀದಿಸಿದವರಿಗೆ, ತಲೆತಲಾಂತರದಿಂದಲೂ ಉಳುಮೆ ಮಾಡಿಕೊಂಡು ಬಂದವರಿಗೆ ಸಂಕಷ್ಟ ಎದುರಾಗಿದೆ. ವಕ್ಫ್ ಬೋರ್ಡ್ ಹೆಸರು ಮೊದಲೇ ಇದ್ದಿದ್ದರೆ ಜಾಗವೇ ಖರೀದಿ ಮಾಡುತ್ತಿರಲಿಲ್ಲ. ಈಗ ಏಕಾ ಏಕಿ ಇದು ವಕ್ಫ್ ಜಾಗ ಎಂದು ನೋಟಿಸ್ ಕೊಟ್ಟಿದ್ದಾರೆ. ನಾವು ಎಲ್ಲಿಗೆ ಹೋಗಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ವಿಶೇಷವೆಂದರೆ ಚಿಂಚೋಳಿಯ ಮಹಾಂತೇಶ್ವರ ಮಠಕ್ಕೂ ವಕ್ಫ್ ನೋಟಿಸ್ ನೀಡಿದೆ. ಇಲ್ಲಿ 10×7 ಜಾಗ ತಮ್ಮದು ಎಂದು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ನಿನ್ನೆ ವಿಜಯಪುರಕ್ಕೆ ಭೇಟಿ ನೀಡಿದ್ದ ಬಿಜೆಪಿ ನಿಯೋಗ ಸತ್ಯಶೋಧನೆ ನಡೆಸಿತ್ತು. ಈ ವೇಳೆ ಹೇಳಿಕೆ ನೀಡಿದ್ದ ಗೋವಿಂದ ಕಾರಜೋಳ ಇಲ್ಲಿನ ಹೊಯ್ಸಳರ ಕಾಲದ ಸೋಮೇಶ್ವರ ಜಾಗವೂ ತನ್ನದು ಎಂದು ವಕ್ಫ್ ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.