ಬೆಂಗಳೂರು: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ವಿವಾದದ ಬಗ್ಗೆ ಇಂದಿನಿಂದ ಬಿಜೆಪಿ ಹೋರಾಟ ಆರಂಭಿಸಲಿದೆ. ವಿಜಯಪುರದಲ್ಲಿ ಇಂದಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ವಕ್ಫ್ ಬೋರ್ಡ್ ಹಲವು ರೈತರ ಜಮೀನುಗಳಿಗೂ ನೋಟಿಸ್ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ವಿವಾದವಾಗುತ್ತಿದ್ದಂತೇ ಈಗ ಸಿಎಂ ಸಿದ್ದರಾಮಯ್ಯ ರೈತರ ಜಮೀನುಗಳಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಲು ಹೇಳಿದ್ದರು. ಹಾಗಿದ್ದರೂ ವಿವಾದ ತಣ್ಣಗಾಗಿಲ್ಲ.
ಕೇವಲ ನೋಟಿಸ್ ಹಿಂಪಡೆದರೆ ಸಾಲದು, ವಕ್ಫ್ ಅದಾಲತ್ ನ್ನೇ ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇಂದು ಬೃಹತ್ ಸಮಾವೇಶದ ಮೂಲಕ ವಕ್ಫ್ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಲಿದೆ. ಉಪಚುನಾವಣೆ ಹೊಸ್ತಿಲಲ್ಲಿ ವಕ್ಫ್ ವಿವಾದ ಬಿಜೆಪಿಗೆ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ಇನ್ನು, ನೋಟಿಸ್ ಹಿಂಪಡೆಯುತ್ತೇವೆ ಎಂದರೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ. ಇದಕ್ಕೆ ಕಿವಿಗೊಡದ ಬಿಜೆಪಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.