ಬೆಂಗಳೂರು: ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿ ಚಂದ್ರಶೇಖರನಾಥ ಗುರೂಜಿ ವಿಧಿವಶರಾಗಿದ್ದಾರೆ. ನಿನ್ನೆ ತಡರಾತ್ರಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ತಡರಾತ್ರಿ 12.01 ಕ್ಕೆ ಅವರು ಭೈರವೈಕ್ಯರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿಕ್ಷಣ, ಆಧ್ಯಾತ್ಮಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೇ ಭಕ್ತರು ತಿವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಕೆಂಗೇರಿಯಲ್ಲಿರುವ ಶ್ರೀಮಠದ ಆವರಣದಲ್ಲೇ ಮಧ್ಯಾಹ್ನದವರೆಗೂ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ಬಳಿಕ ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ.
ಶ್ರೀಗಳ ಉತ್ತರಾಧಿಕಾರಿಯಾಗಿರುವ ನಿಶ್ಚಲಾನಂದ ಸ್ವಾಮೀಜಿಗಳು ವಿಧಿ ವಿಧಾನ ನೆರವೇರಿಸಲಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದರು.