Publish Date: Fri, 24 Jul 2026 (08:49 IST)
Updated Date: Fri, 24 Jul 2026 (08:59 IST)
ದೇಶಾದ್ಯಂತ ನೀಟ್ ಪರೀಕ್ಷೆ ಅಕ್ರಮ ಹಾಗೂ ಪೇಪರ್ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಸೆಲ್ಫಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. "ಯುವಜನತೆಯ ಭವಿಷ್ಯ ಮತ್ತು ಕ್ಷೇಮಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ" ಎಂದು ಹೇಳಿರುವ ಪ್ರಧಾನಿಯವರು, ಪೇಪರ್ ಸೋರಿಕೆ ತಡೆಯಲು ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಮತ್ತಷ್ಟು ಕಠಿಣ ಕಾನೂನು ತರುವುದಾಗಿ ಭರವಸೆ ನೀಡಿದ್ದಾರೆ.
ಪೇಪರ್ ಸೋರಿಕೆ ಸಾಮಾನ್ಯ ವಿಚಾರವಲ್ಲ
ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸ್ನೇಹಿತರೇ, ಪೇಪರ್ ಸೋರಿಕೆ ಎಂಬುದು ಸಣ್ಣ ವಿಷಯವಲ್ಲ ಎಂಬ ಅರಿವು ನನಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತೀವ್ರ ಮನಸ್ಸಿನ ನೋವುಂಟು ಮಾಡುತ್ತದೆ. ಕಳೆದೆರಡು ತಿಂಗಳಿನಿಂದ ಅಕ್ರಮ ಎಸಗಿದ ಅಪರಾಧಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ" ಎಂದು ಸ್ಪಷ್ಟಪಡಿಸಿದರು.
ಶೀಘ್ರವೇ ಕಠಿಣ ಕರಡು ಮಸೂದೆ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್:ಪೇಪರ್ ಸೋರಿಕೆ ದಂಧಕೋರರಿಗೆ ತಕ್ಷಣವೇ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು.
ಸಂಬಂಧಪಟ್ಟ ಇಲಾಖೆಗಳು ಕಠಿಣ ಕಾನೂನಿನ ಕರಡನ್ನು ಸಿದ್ಧಪಡಿಸಿದ್ದು, ನಾಳೆ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು. ಬರುವ ಸೋಮವಾರದಿಂದ ಪ್ರಾರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸಿ ಜಾರಿಗೆ ತರಲು ಸರ್ಕಾರ ಪ್ರಯತ್ನಿಸಲಿದೆ.
ರಾಜಕೀಯ ಕಾವು ಮತ್ತು ಪ್ರತಿಭಟನೆ
ಮತ್ತೊಂದೆಡೆ, ದೆಹಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಜೆಪಿ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಕೇಂದ್ರ ಸರ್ಕಾರವು ಫಾಸ್ಟ್ ಟ್ರ್ಯಾಕ್ ಕೋರ್ಟ್ ಹಾಗೂ ನೂತನ ಮಸೂದೆಯ ಮೂಲಕ ಆಕ್ರೋಶಗೊಂಡಿರುವ ಯುವಜನತೆಯನ್ನು ಶಾಂತಗೊಳಿಸಲು ಮುಂದಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ