Publish Date: Mon, 17 Aug 2026 (18:22 IST)
Updated Date: Mon, 17 Aug 2026 (18:25 IST)
ಬೆಂಗಳೂರು: ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತ ನಾಗೇಂದ್ರ ಎಂದರೆ ಮುಖ್ಯಮಂತ್ರಿಗಳಿಗೆ ಭಯವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲ, ಕೆಪಿಎಸ್ಸಿ ಹಗರಣ ಸೇರಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಇವೆಲ್ಲ ಚರ್ಚೆ ಮಾಡಲು ಮುಖ್ಯಮಂತ್ರಿಗಳು ಇಂಥ ಕಳಂಕಿತ ಸಚಿವರನ್ನು ಮಂತ್ರಿಮಂಡಲದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಸರಕಾರದಲ್ಲಿ ಕಳಂಕಿತರಾದ ನಾಗೇಂದ್ರರನ್ನು ಸಚಿವಸಂಪುಟದಲ್ಲಿ ಸೇರಿಸಿದ್ದು, ಅವರನ್ನು ಕೈಬಿಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಾಸಕರು ಇವತ್ತು ಸದನದಲ್ಲಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಮ್ಮ ಕಾರ್ಯಕರ್ತರು ಪ್ರತಿಭಟನೆಯನ್ನು ಇವತ್ತು ಪ್ರಾರಂಭಿಸಿದ್ದಾರೆ. ಅನಿರ್ದಿಷ್ಟಾವಧಿ ಕಾಲದವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಾಗೇಂದ್ರ ಅವರು ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮತ್ತೆ ಅವರನ್ನು ಸಚಿವಸಂಪುಟಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಯಾಕೆ ಬಂತು ನಿಮಗೆ ಎಂದು ಕೇಳಿದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ ವ್ಯಕ್ತಿಯನ್ನು ಮತ್ತೆ ಸಚಿವಸಂಪುಟಕ್ಕೆ ತೆಗೆದುಕೊಂಡಿದ್ದೀರಿ. ಮಾನ್ಯ ಮುಖ್ಯಮಂತ್ರಿಗಳೇ, ಈ ದಲಿತ ಸಮುದಾಯದ ಬಗ್ಗೆ ಇದೇನಾ ನಿಮ್ಮ ಕಾಳಜಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಾಗೇಂದ್ರರ ವಿಚಾರ ಇದೇ ಸದನದಲ್ಲಿ ಈ ಹಿಂದೆ ಅವ್ಯವಹಾರದ ಕುರಿತಂತೆ ಚರ್ಚೆ ಆಗಿದೆ. ನಂತರದಲ್ಲೇ ನಾಗೇಂದ್ರರ ರಾಜೀನಾಮೆ ಪಡೆಯಲಾಗಿತ್ತು. ಈ ವಿಚಾರದಲ್ಲಿ ಚರ್ಚೆ ಬೇಡ. ನಾಗೇಂದ್ರರ ವಿರುದ್ಧ ಇದೀಗ ಆರೋಪಪಟ್ಟಿ ಹಾಕಲಾಗಿದೆ. ಅವರು ನಿರಪರಾಧಿ ಎಂದು ಎಲ್ಲೂ ಸಾಬೀತಾಗಿಲ್ಲ ಎಂದು ತಿಳಿಸಿದರು.
ನಾಳೆ ನಾಗೇಂದ್ರರು ನಿಪರರಾಧಿ ಎಂದು ಸಾಬೀತಾದರೆ ಅವರನ್ನು ಸಚಿವರನ್ನಾಗಿ ಮಾಡುವ ಬದಲು ಮುಖ್ಯಮಂತ್ರಿಯನ್ನಾಗಿ ಮಾಡಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದರು. ಇವತ್ತು ಕಳಂಕಿತ ಸಚಿವರನ್ನು ಸದನದಲ್ಲಿ ಕೂರಿಸಿಕೊಂಡು ನಾವು ಚರ್ಚೆ ಮಾಡಲು ತಯಾರಿಲ್ಲ. ಅವರು ನಿರ್ದೋóಷಿ ಎಂದು ಸಾಬೀತಾಗುವವರೆಗೆ ಸಚಿವಸಂಪುಟದಲ್ಲಿ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸದನದ ಒಳಗೆ ಮಾತ್ರವಲ್ಲದೇ ಸದನದ ಹೊರಗಡೆಯಿಂದಲೂ ಹೋರಾಟ ಮಾಡುತ್ತಿದ್ದೇವೆ ಎಂದು ನುಡಿದರು. ಹಣವನ್ನು ನೂರಾರು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು, ಚಿನ್ನ ಖರೀದಿ ಮಾಡಿದ್ದು ಜಗಜ್ಜಾಹೀರಾಗಿದೆ. ಇದರ ಕುರಿತು ವಿಧಾನಪರಿಷತ್ತಿನಲ್ಲಿ ಮಾಹಿತಿ ಕೊಟ್ಟಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಲೋಕಸಭಾ ಚುನಾವಣೆಯಲ್ಲಿ ಈ ಹಣ ದುರುಪಯೋಗ ಆದ ಕುರಿತಂತೆ ಇ.ಡಿ. ಪತ್ರಿಕಾ ಹೇಳಿಕೆಯಲ್ಲೂ ತಿಳಿಸಿದ್ದಾರೆ. ಈ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾವು ಕೂಡ ಸದನದ ಅಮೂಲ್ಯ ಸಮಯ ವ್ಯರ್ಥ ಮಾಡಲು ಸಿದ್ಧರಿಲ್ಲ ಎಂದು ತಿಳಿಸಿದರು. ಬರಗಾಲ, ಕೆಪಿಎಸ್ಸಿ ಹಗರಣ ಸೇರಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಇವೆಲ್ಲ ಚರ್ಚೆ ಮಾಡಲು ಮುಖ್ಯಮಂತ್ರಿಗಳು ಇಂಥ ಕಳಂಕಿತ ಸಚಿವರನ್ನು ಮಂತ್ರಿಮಂಡಲದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ