ಬೆಂಗಳೂರು: ಕೇಂದ್ರ ಸರಕಾರ ನೀಡಿದ ವಿಶೇಷ ಅನುದಾನವನ್ನು ರಾಜ್ಯ ಸರಕಾರವು ಆಯಾ ಯೋಜನೆಗಳಿಗೆ ಬಳಸದೇ ತನ್ನ ಇಚ್ಛಾನುಸಾರವಾಗಿ ಬೇರೆ ಯೋಜನೆಗಳಿಗೆ, ಇತರ ಇಲಾಖೆಗಳಿಗೆ ಬಳಸಿಕೊಂಡಿದೆ. ರಾಜ್ಯ ಸರಕಾರಕ್ಕೆ ಆ ಅಧಿಕಾರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರಕಾರ ಮತ್ತು ಸಂಬಂಧಿತ ಇಲಾಖೆಯು ಆ ಹಣವನ್ನು ಸದ್ಬಳಕೆ ಮಾಡದೇ ಹಣಕಾಸು ಇಲಾಖೆ ಒತ್ತಾಯದ ಮೇರೆಗೆ ಹಣಬಳಕೆ ಸಂಬಂಧ ನಕಲಿ (ಫ್ಯಾಬ್ರಿಕೇಟೆಡ್) ದೃಢಪತ್ರವನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಅವರು ದೂರಿದರು. ಕೇಂದ್ರದ 1323.96 ಕೋಟಿ ವಿಶೇಷ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಹಣಕ್ಕೆ ನಕಲಿ ಬಳಕೆ ಪ್ರಮಾಣಪತ್ರ ಕೊಟ್ಟಿದ್ದಾರಾ ಇಲ್ಲವೇ ಎಂಬ ಕುರಿತು ಮುಖ್ಯಮಂತ್ರಿಗಳು ಉತ್ತರಿಸಲಿ ಎಂದು ಆಗ್ರಹವನ್ನು ಮುಂದಿಟ್ಟರು. ಈ ಹಣ ಎಲ್ಲಿ ವರ್ಗಾವಣೆ ಆಗಿದೆ? ಎಂದು ಅವರು ಕೇಳಿದರು. ಈ ಸಂಬಂಧ ದಾಖಲೆಪತ್ರಗಳನ್ನೂ ಅವರು ಬಿಡುಗಡೆ ಮಾಡಿದರು.
2025ರ ಜುಲೈ 1ರಂದು ಹಣಕಾಸು ಇಲಾಖೆಯಿಂದ ಬಂಡವಾಳ ಹೂಡಿಕೆ ಸಂಬಂಧ ಮೇಲಿನ ಹಣ ಬಿಡುಗಡೆ ಆಗಿತ್ತು. ಕರ್ನಾಟಕ ಸಣ್ಣ ನೀರಾವರಿ ಇಲಾಖೆಯು ಕೇಂದ್ರಕ್ಕೆ ಹಣ ಬಳಕೆ ಪ್ರಮಾಣಪತ್ರ ನೀಡಬೇಕಿತ್ತು. ಹಣವನ್ನು ನಿಗದಿತ ಉದ್ದೇಶಕ್ಕೆ ಸದ್ಬಳಕೆ ಮಾಡಲಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ. ಕೃಷ್ಣ ಭಾಗ್ಯ ಜಲನಿಗಮದಲ್ಲೂ ಅದೇ ಮಾದರಿಯ ಪ್ರಮಾಣಪತ್ರವನ್ನು ನೀಡಿದ್ದಾರೆ. ಅದೇರೀತಿ ವಿಶ್ವೇಶ್ವರಯ್ಯ ಜಲನಿಗಮದಿಂದ ಹಣಕಾಸು ಇಲಾಖೆ ಒತ್ತಾಯದ ಮೇರೆಗೆ ಪ್ರಮಾಣಪತ್ರ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಇದು ಬಡ್ಡಿರಹಿತ ಮತ್ತು ವಿಶೇಷ ಅನುದಾನ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆಗಿತ್ತು. ನನ್ನ ಪ್ರಕಾರ ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳ ಅನುಮತಿ ಇಲ್ಲದೇ ಪಕ್ಕದ ತೆಲಂಗಾಣ ರಾಜ್ಯಕ್ಕೆ ನೂರಾರು ಕೋಟಿ ಮೊತ್ತ ವರ್ಗಾವಣೆ ಆಗಲು ಸಾಧ್ಯವೇ ಇರಲಿಲ್ಲ. ಸಾವಿರಾರು ನಕಲಿ ಖಾತೆಗಳನ್ನು ತೆರೆದು ಹಣ ಪಡೆದು ಬಳಸಿಕೊಂಡ ಕುರಿತು ತನಿಖೆ ನಡೆಯುತ್ತಿದೆ. ಸಂಬಂಧಿತ ಸಚಿವರೂ ರಾಜೀನಾಮೆ ನೀಡಿದ್ದಾರೆ ಎಂದು ಗಮನ ಸೆಳೆದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿ ಚಂದ್ರಶೇಖರ್ ಹಿರಿಯ ಅಧಿಕಾರಿಗಳ ಒತ್ತಡ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ರಾಜ್ಯದ ಜನರು ನೋಡಿದ್ದಾರೆ ಎಂದು ವಿವರಿಸಿದರು.
ಆರ್ಥಿಕ ಇಲಾಖೆ ಕೋರಿಕೆ ಮೇಲೆ ಕೇಂದ್ರ ಸರಕಾರದ ವಿಶೇಷ ಅನುದಾನದಡಿಯಲ್ಲಿ 132 ಕೋಟಿ ರೂ,ಗಳ ಉಪಯೋಗಿಸಿದ ಪ್ರಮಾಣಪತ್ರ ಸಲ್ಲಿಸಿದೆ. ಆದರೆ, ಸದರಿ ಅನುದಾನ 132 ಕೋಟಿ ಬಿಡುಗಡೆ ಆಗದೇ ಬಾಕಿ ಇರುತ್ತದೆ ಎಂದು ಇಲಾಖೆ ಅಧಿಕಾರಿಗಳು ಬರೆದಿದ್ದರು. ಆದ್ದರಿಂದ ಈ ಹಣಬಳಕೆ ಸರ್ಟಿಫಿಕೇಟ್ ನಕಲಿಯೇ? ಒತ್ತಾಯದಿಂದ ಕೊಡಲಾಗಿದೆಯೇ? ಇದು ಸರಿಯಾದ ಹಣಬಳಕೆ ದೃಢಪತ್ರವೇ ಎಂಬ ಕುರಿತು ಹಣಕಾಸು ಇಲಾಖೆ, ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳು ವಿವರಣೆ ನೀಡಬೇಕೆಂದು ಆಗ್ರಹವನ್ನು ಮುಂದಿಟ್ಟರು. ಹಾಗಿದ್ದರೆ ಕೇಂದ್ರದ ಅನುದಾನವನ್ನು ಯಾವ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಕೇಳಿದರು.
ನಮ್ಮ ಶಾಸಕರು 5 ಸಾವಿರ ಕೋಟಿ ಗೃಹಲಕ್ಷ್ಮಿ ಯೋಜನೆ ಎಲ್ಲಿ ವರ್ಗಾವಣೆ ಆಗಿದೆ? ಎಂದು ಬೆಳಗಾವಿಯ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಉಪಯೋಗ ಆಗಿದೆಯೇ? ದುರುಪಯೋಗ ಆಗಿದೆಯೇ? ಭ್ರಷ್ಟಾಚಾರ ಆಗಿದೆಯೇ? ಎಂಬ ಕುರಿತು ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳು ಇಂದಿನವರೆಗೆ ಉತ್ತರಿಸಿಲ್ಲ ಎಂದು ಆಕ್ಷೇಪಿಸಿದರು. ಮೊನ್ನೆ ಸದನದಲ್ಲೂ ವಿಪಕ್ಷ ನಾಯಕ ಆರ್.ಅಶೋಕ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉಡಾಫೆ ಉತ್ತರ ಕೊಟ್ಟಿದ್ದಾಗಿ ಟೀಕಿಸಿದರು. ಈಗಲಾದರೂ ಮುಖ್ಯಮಂತ್ರಿಗಳು 5 ಸಾವಿರ ಕೋಟಿ ಬಾಕಿ ಬಗ್ಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.