Select Your Language

Notifications

webdunia
webdunia
webdunia
webdunia

ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ವಿದ್ಯಾನಿಧಿ ಘೋಷಣೆ

ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ವಿದ್ಯಾನಿಧಿ ಘೋಷಣೆ
bangalore , ಬುಧವಾರ, 1 ಜೂನ್ 2022 (19:58 IST)
ಅಧಿಕಾರ ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಘೋಷಿಸಲಾಗಿತ್ತು. ಇಂದು ಈ ಯೋಜನೆಯ ಫಲ ರೈತರ ಮಕ್ಕಳಿಗೆ ತಲುಪಿರುವುದು ಅತ್ಯಂತ ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
 
ಅವರು ಇಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ರೈತ ವಿದ್ಯಾನಿಧಿ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದರು.
 
ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಂಡಿರುವುದನ್ನು ಅರಿತು ನನ್ನ ಶಕ್ತಿ ಇಮ್ಮಡಿಯಾಗಿದೆ. ನಾವೆಲ್ಲರೂ ಸೇರಿ ಯುವಕರನ್ನು ಬೆಳೆಸಿ, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
 
ಹಿಂದೆ ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಎಂಬ ಚಿಂತನೆಯಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ 130 ಕೋಟಿ ಜನರು, ಅದರಲ್ಲೂ ಶೇ. 46 ರಷ್ಟಿರುವ ಯುವಜನರು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿ ಎಂದರು. ಬೇರೆ ಯಾವ ದೇಶದಲ್ಲಿಯೂ ಈ ಪ್ರಮಾಣದಲ್ಲಿ ಯುವಜನರ ಸಂಖ್ಯೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 
‘ನಿಮ್ಮ ವಯಸ್ಸು ವಿದ್ಯಾರ್ಜನೆ ಮಾಡುವ, ಆಟ-ಪಾಠದಲ್ಲಿ ತೊಡಗಿಸಿಕೊಳ್ಳುವ ವಯಸ್ಸು. ಜಗತ್ತನ್ನು ತಿಳಿದುಕೊಳ್ಳುವ ವಯಸ್ಸು. ಆದ್ದರಿಂದ ನೀವು ತಾರ್ಕಿಕ ಚಿಂತನೆ ಮಾಡಬೇಕು. ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
 
ರೈತ ಮಣ್ಣು, ಬಿಸಿಲು, ಕಲ್ಲು, ಮಳೆ, ಗಾಳಿ ಚಳಿಯೆನ್ನದೆ ದುಡಿಯುತ್ತಾನೆ. ಅವನ ಕೈಯ ರೇಖೆಗಳು ಅಳಿದರೂ ದುಡಿಮೆಯ ಮೂಲಕ ತನ್ನ ಹಣೆಬರಹ ಬರೆಯುತ್ತಾನೆ; ದೇಶದ ಹಣೆಬರಹವನ್ನೂ ಬರೆಯುತ್ತಾನೆ. ದೇವರು ಕಾರ್ಮಿಕರ ಶ್ರಮದಲ್ಲಿದ್ದಾನೆ; ರೈತರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಟ್ಯಾಗೋರರು ಹೇಳಿದ್ದಾರೆ. ಇಂತರ ರೈತರ ಬಗ್ಗೆ ಗೌರವ ಇರಬೇಕು. ಬೆಲೆ ಕೊಡಬೇಕು. ಆದರೆ ರೈತ ಸಂಕಷ್ಟದಲ್ಲಿದ್ದಾನೆ. ಇದನ್ನು ಹಳ್ಳಿಗಳಿಗೆ ಭೇಟಿ ನೀಡಿದಾಗ ತಾವು ಕಣ್ಣಾರೆ ಕಂಡಿರುವುದಾಗಿ ಸೋದಾಹರಣವಾಗಿ ವಿವರಿಸಿದರು. ರೈತರ ಮಕ್ಕಳೂ ಉನ್ನತ ಸಾಧನೆ ಮಾಡಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
 
ದೇಶದ ಒಟ್ಟು ಆದಾಯಕ್ಕೆ ಶೇ. 30 ರಷ್ಟು ಜನರು ಮಾತ್ರ ಕೊಡುಗೆ ನೀಡುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು , ಅದರಲ್ಲೂ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ 4 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಾರ್ಮಿಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
 
21ನೇ ಶತಮಾನ ಜ್ಞಾನದ ಶತಮಾನ. ಆದ್ದರಿಂದ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಜ್ಞಾನಾರ್ಜನೆ ಮಾಡಿ ಉತ್ತಮ ಸಾಧನೆ ಮಾಡಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಆತ ತನ್ನ ಸಾಧನೆಗಳ ಮೂಲಕ ಜೀವಂತ ಇರುತ್ತಾನೆ. ನೀವು ಕೂಡ ಇಂತಹ ಉನ್ನತ ಸಾಧನೆ ಮಾಡಬೇಕು. ಜನರು ನಿಮ್ಮನ್ನು ಪ್ರೀತಿಸುವಂತಹ, ಗೌರವಿಸುವಂತಹ ಸಾಧನೆ ಮಾಡಬೇಕು. ಆ ಮೂಲಕ ನಿಮ್ಮತನ ಉಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
 
“ನನ್ನ ಹಣೆಬರಹ ನಾನೇ ಬರೆಯುತ್ತೇನೆ”; ತಂದೆ ತಾಯಿಗಳ ಕನಸು ನನಸು ಮಾಡುತ್ತೇನೆ ಎಂದು ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ. ಅದಕ್ಕೆ ತಕ್ಕಂತೆ ಹೆಚ್ಚಿನ ಪರಿಶ್ರಮ ವಹಿಸಿ, ಸಾಧನೆ ಮಾಡಿ ಎಂದು ಸಲಹೆ ನೀಡಿದರು.
 
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಆರ್. ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಮ ಒನ್ ಕೇಂದ್ರ ರಾಜ್ಯಾದ್ಯಂತ ಪ್ರಾರಂಭಕ್ಕೆ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ