Publish Date: Fri, 07 Aug 2026 (11:23 IST)
Updated Date: Fri, 07 Aug 2026 (11:34 IST)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯ ಕಚೇರಿಯಲ್ಲಿ ಅಧಿಕಾರಿಗಳ ಲಂಚಾವತಾರ ಹಾಗೂ ಗೂಂಡಾ ವರ್ತನೆ ಮಿತಿಮೀರಿದ್ದು, ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ.
ಆಸ್ತಿಯ 'B' ಖಾತೆಯಿಂದ 'A' ಖಾತೆಗೆ ಪರಿವರ್ತನೆ ಮಾಡಿಕೊಡಲು ಜಂಟಿ ಆಯುಕ್ತರ ಸಹಿ ಬೇಕಿದ್ದಲ್ಲಿ ಭಾರೀ ಪ್ರಮಾಣದ ಲಂಚ ನೀಡಲೇಬೇಕು ಎಂಬ ಅಸಲಿ ದಂಧೆ ಬೆಳಕಿಗೆ ಬಂದಿದೆ.
ಲಂಚ ನೀಡಿದರೆ ಮಾತ್ರ ಸಹಿ
ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ನಾಗರಿಕರು ತಮ್ಮ ಆಸ್ತಿಯನ್ನು 'B' ಖಾತೆಯಿಂದ 'A' ಖಾತೆಗೆ ವರ್ಗಾಯಿಸಲು ನಿಯಮಾನುಸಾರ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ಹತ್ತಾರು ನೆಪ ಹೇಳಿ ಅಲೆಸುತ್ತಿದ್ದಾರೆ. ಲಂಚದ ಹಣ ಕೈಸೇರಿದರೆ ಮಾತ್ರ ಜಂಟಿ ಆಯುಕ್ತರು ಕಡತಕ್ಕೆ ಸಹಿ ಹಾಕುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನ್ಯಾಯ ಕೇಳಲು ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರೊಂದಿಗೆ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕನಿಷ್ಠ ಸೌಜನ್ಯವೂ ಇಲ್ಲದೆ ಅಸಭ್ಯವಾಗಿ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಎಲ್ಲಾ ಕಾಯ್ದೆ-ಕಾನೂನು ಮತ್ತು ಸರಿಯಾದ ದಾಖಲೆಗಳಿದ್ದರೂ ಸಹ ಕಮಿಷನ್ ನೀಡದಿದ್ದರೆ ಕಡತಗಳನ್ನು ತಿಂಗಳಾನುಗಟ್ಟಲೆ ಬಾಕಿ ಇಟ್ಟು ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ.
GBA ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರಬೇಕಾದ ಅಧಿಕಾರಿಗಳೇ ಈ ರೀತಿ ಕಮಿಷನ್ ದಂಧೆಯಲ್ಲಿ ತೊಡಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಲೋಕಾಯುಕ್ತ ಹಾಗೂ ಹಿರಿಯ ಅಧಿಕಾರಿಗಳು ರಾಜರಾಜೇಶ್ವರಿನಗರ ವಲಯ ಕಚೇರಿಯ ಮೇಲೆ ದಾಳಿ ನಡೆಸಿ, ಲಂಚಕೋರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ