Publish Date: Fri, 14 Aug 2026 (09:35 IST)
Updated Date: Fri, 14 Aug 2026 (09:42 IST)
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಬಳಿ ಮುಂಜಾನೆ ವೇಳೆ ಭೀಕರ ಚೈನ್ ಸ್ನ್ಯಾಚಿಂಗ್ (ಚಿನ್ನದ ಸರಗಳ್ಳತನ) ಘಟನೆ ನಡೆದಿದೆ. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಇಬ್ಬರು ಬೈಕ್ ಸವಾರರು, ಅವರ ಕೊರಳಿನಲ್ಲಿದ್ದ 25 ಗ್ರಾಂ ತೂಕದ ಮಂಗಲಸೂತ್ರವನ್ನು ದೋಚಿ ಪರಾರಿಯಾಗಿದ್ದಾರೆ. ಈ ಇಡೀ ಕ್ರೂರ ಕೃತ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ವಿವರ
ಸಂತ್ರಸ್ತ ಮಹಿಳೆಯನ್ನು ವಿಜಯಮ್ಮ ಎಂದು ಗುರುತಿಸಲಾಗಿದೆ. ಅವರು ಬೆಳಗಿನ ಜಾವ ಸುಮಾರು 5:10 ರ ಸುಮಾರಿಗೆ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ, ಹಿಂಬದಿ ಕುಳಿತಿದ್ದ ಸವಾರ ದಿಢೀರನೆ ವಿಜಯಮ್ಮ ಅವರ ಮೇಲೆರಗಿ, ಅವರನ್ನು ನೆಲಕ್ಕೆ ಎಳೆದೊಯ್ದಿದ್ದಾನೆ. ಮಹಿಳೆ ತೀವ್ರವಾಗಿ ಪ್ರತಿರೋಧ ಒಡ್ಡಿದರೂ ಸಹ, ಆತನ ರಭಸಕ್ಕೆ ಅವರು ಕೆಳಗೆ ಬಿದ್ದು ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಅಷ್ಟರಲ್ಲಿ ದುಷ್ಕರ್ಮಿ ಅವರ ಕೊರಳಿನಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಮಂಗಲಸೂತ್ರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೀಣ್ಯ ಪೊಲೀಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮುಂಜಾನೆ ಹಾಗೂ ತಡರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಈ ಘಟನೆಯು ಸ್ಥಳೀಯರಲ್ಲಿ ಮತ್ತೆ ಆತಂಕ ಮೂಡಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ