Publish Date: Mon, 30 Mar 2026 (16:45 IST)
Updated Date: Mon, 30 Mar 2026 (16:50 IST)
ಬಾಗಲಕೋಟೆ: ಮುಖ್ಯಮಂತ್ರಿಯಾದಿಯಾಗಿ ಯಾರೇ ಇಲ್ಲಿ ಬಂದು ಬೀಡು ಬಿಟ್ಟರೂ ಮತದಾರರು ಬಿಜೆಪಿಗೆ ಆಶೀರ್ವಾದ ನೀಡಿ ಚರಂತಿಮಠ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಇಂದು ಉತ್ತರ ನೀಡಿದ ಅವರು, ಕಾಂಗ್ರೆಸ್ಸಿನ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ ಎಂದು ತಿಳಿಸಿದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರವಾಗಿ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಬೆಳಿಗ್ಗೆ 7ರಿಂದ ಮತಯಾಚನೆ ಮಾಡುತ್ತಿದ್ದಾರೆ. ವಾತಾವರಣ ಬಿಜೆಪಿ ಪರವಾಗಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ; ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿಗೆ ವಾಸ್ತವಿಕ ಸತ್ಯ ಅರ್ಥವಾಗಿದೆ. ವೀರಣ್ಣ ಚರಂತಿಮಠ್ ಅವರು ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಹಣಬಲ, ತೋಳ್ಬಲ ಬಳಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ಮಾಡಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ. ಆದರೆ, ಇಲ್ಲಿನ ಪ್ರಜ್ಞಾವಂತ ಮತದಾರರು ಬಿಜೆಪಿ ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದರು.
ನಾನು ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರು ಮಹಾನಗರ ಯುವ ಮೋರ್ಚಾ ಕಾರ್ಯದರ್ಶಿಯಾಗಿ, ನಂತರ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇದೀಗ ಪಕ್ಷದ ವರಿಷ್ಠರು ಅಪೇಕ್ಷೆ ಪಟ್ಟ ಕಾರಣ ಈ ಜವಾಬ್ದಾರಿ ಕೊಟ್ಟಿದ್ದಾರೆ. ಸಂಘಟನೆ ಕೆಲಸ ಹುಡುಗಾಟಿಕೆಯಲ್ಲ. ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಕಾಂಗ್ರೆಸ್ಸಿನ ವಂಶ ರಾಜಕಾರಣವನ್ನು ಜನರು ನೋಡುತ್ತಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಯತ್ನಾಳ್ ಅವರ ಪ್ರಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಚರಂತಿಮಠ ಅವರು ಜನಾನುರಾಗಿ. ಯಾರ ವಿರೋಧವನ್ನೂ ಅವರು ಕಟ್ಟಿಕೊಂಡವರಲ್ಲ. ಕಾಂಗ್ರೆಸ್ ಪಕ್ಷದವರೂ ಚರಂತಿಮಠ ಅವರು ಗೆಲ್ಲಬೇಕೆಂದು ಬಯಸುತ್ತಿದ್ದಾರೆ. ಕಾಂಗ್ರೆಸ್ಸಿನವರೇ ಬಯಸುವಾಗ ಅವರು, ಇವರು ಬಯಸುವುದರಲ್ಲಿ ತಪ್ಪೇನಿಲ್ಲ ಎಂದು ನುಡಿದರು.
ಬಾಗಲಕೋಟೆ- ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷದವರು ನಮಗೆ ಒಳಗೊಳಗೆ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕೆಂದು ಯಾರೇ ಕೆಲಸ ಮಾಡಿದರೂ ಅದನ್ನು ಸ್ವಾಗತಿಸುವೆ ಎಂದು ಅವರು ತಿಳಿಸಿದರು. ಚುನಾವಣಾ ಫಲಿತಾಂಶ ಬರಲಿ; ಕಾಂಗ್ರೆಸ್ಸಿನಲ್ಲಿ ಎಷ್ಟು ಬಾಗಿಲು ಇÀದೆ? ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ ಎಂಬುದು ಎಂ.ಬಿ.ಪಾಟೀಲರಿಗೆ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಹಿಂದೆ ಬಿಜೆಪಿ ಸರಕಾರ ಕೊಟ್ಟ ಕಾರ್ಯಕ್ರಮಗಳಿಗೆ ಇವತ್ತು ಕೂಡ ಗುದ್ದಲಿ ಪೂಜೆ ಆಗುತ್ತಿದೆ. ಯಾವುದೇ ರೀತಿ ಅಭಿವೃದ್ಧಿಗೆ ಇವರು ಹಣ ನೀಡಿಲ್ಲ ಎಂದು ಟೀಕಿಸಿದರು. ಪೊಲೀಸ್ ಇಲಾಖೆ ಸಿಬ್ಬಂದಿ- ಅಧಿಕಾರಿಗಳಿಗೆ ಪ್ರತಿತಿಂಗಳು ಒಂದನೇ ತಾರೀಖಿನಂದು ಸಂಬಳ ಕೊಡಬೇಕು. ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೊಂದು ತಿಂಗಳು ತಡ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡದೇ 2 ತಿಂಗಳಾಗಿದೆ. ಬೇರೆ ಬೇರೆ ವಿವಿಗಳಲ್ಲೂ ಇದೇ ಪರಿಸ್ಥಿತಿ ಇದೆ. 17 ಬಜೆಟ್ ಮಂಡಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರಕ್ಕಾಗಿ ಹಲವು ಬಾರಿ ಒತ್ತಾಯಿಸಿದ್ದೇವೆ ಎಂದು ಗಮನ ಸೆಳೆದರು.