Publish Date: Wed, 04 Mar 2026 (21:29 IST)
Updated Date: Wed, 04 Mar 2026 (21:43 IST)
ವೇಣೂರು: ಇಲ್ಲಿನ ಮೂಡುಕೋಡಿ ಗ್ರಾಮದ ಬೊಮ್ಮನಟ್ಟ ಮನೆಯ ಪರಿಸರದಲ್ಲಿ ಪತ್ತೆಯಾದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ವೇಳೆ, ಅದು ಉರಗ ತಜ್ಞನ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದಿದೆ. ಇದನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿದ್ದು, ನೋಡುವಾಗ ಮೈ ನವಿರೇಳಿಸುತ್ತದೆ.
ಅತ್ಯಂತ ವಿಷಪೂರಿತ ಹಾವು ಆಗಿರುವ ಕಾಳಿಂಗ ಸರ್ಪವು ಮಲೆನಾಡು ಭಾಗದಲ್ಲಿ ಹೆಚ್ಚು ಕಾಣಸಿಗುತ್ತದೆ. ಇದೀಗ ಬಿಸಿಲಿನ ತಾಪಕ್ಕೆ ಹಾವುಗಳು ಜಾಸ್ತಿ ಜನಬಿಡದಿ ಪ್ರದೇಶದಲ್ಲಿ ಕಾಣಸಿಗುತ್ತದೆ.
ಇಂದು ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಗ್ರಾಮದ ಬೊಮ್ಮನಟ್ಟದ ವಿಶ್ವನಾಥ್ ಎಂಬವರ ಮನೆಯ ಪರಿಸರದಲ್ಲಿ ಹಾವು ಇರುವುದನ್ನು ಮನೆಯವರು ನೋಡಿದ್ದಾರೆ. ಅವರು ಈ ವಿಚಾರವನ್ನು ವೇಣೂರು ಪಂಚಾಯಿತಿನ ಸದಸ್ಯ ಅನುಪ್ ಜೆ ಪಾಯಸ್ ಅವರಿಗೆ ತಿಳಿಸಿದಾಗ ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಬಂಟ್ವಾಳದ ಕಾವಲ್‌ಕಟ್ಟೆಯ ಉರಗ ತಜ್ಞ ಸ್ನೇಕ್ ಪ್ರಸಾದ್ ಅವರು ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಳಿಂಗ ಸರ್ಪವನ್ನು ಹಿಡಿಯುವ ವೇಳೆ ಅದು ಎರಡು ಮೂರು ಬಾರಿ ಉರಗ ತಜ್ಞನನ್ನು ಕಚ್ಚಲು ಯತ್ನಿಸಿದೆ. 10 ಅಡಿ ಉದ್ದದ ಕಾಳಿಂಗ ಸರ್ಪವು ಬರೋಬ್ಬರಿ 13ಕೆಜಿ ತೂಕವಿತ್ತು ಎನ್ನಲಾಗಿದೆ.