ಬೆಂಗಳೂರು : ಸ್ನೇಹಿತರೆದುರೇ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಶನಿವಾರ ನಡೆದಿದೆ.
ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ಹೆಬ್ಬಗೋಡಿಯ ಎಸ್.ಎಫ್.ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ದೀಪು (20), ಯೋಗಿಶ್ವರನ್ (20) ಮೃತಪಟ್ಟಿದ್ದಾರೆ.
ಕಲ್ಯಾಣಿಯಲ್ಲಿ ಈಜಲು ಐವರು ವಿದ್ಯಾರ್ಥಿಗಳು ತೆರಳಿದ್ದರು. ಮಧ್ಯಭಾಗದಲ್ಲಿ ಆಟವಾಡುತ್ತಿದ್ದಾಗ ಯೋಗೇಶ್ವರನ್ ಈಜು ಬರದೇ ಪರದಾಡುತ್ತಿರುವುದನ್ನು ನೋಡಿ ಸ್ನೇಹಿತ ದೀಪು ನೆರವಿಗೆ ಧಾವಿಸಿದ್ದಾನೆ. ಈ ವೇಳೆ ಇಬ್ಬರಿಗೂ ಈಜಲು ಕಷ್ಟವಾಗಿ ಮುಳುಗಲು ಆರಂಭಿಸಿದರು.
ಅಲ್ಲೇ ಉಳಿದ ಸ್ನೇಹಿತರಿದ್ದರೂ ಅವರಿಗೆ ಸರಿಯಾಗಿ ಈಜು ಬಾರದೇ ಯಾರೂ ರಕ್ಷಣೆಗೆ ತೆರಳಲಿಲ್ಲ. ಹೀಗಾಗಿ ಅವರ ಕಣ್ಣುದುರೇ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಯಾಣಿ ಮೇಲೆ ನಿಂತಿದ್ದ ಉಳಿದ ಸ್ನೇಹಿತರು ವಿಡಿಯೋ ಮಾಡಿದ್ದು ವಿದ್ಯಾರ್ಥಿಗಳ ಕೊನೆ ಕ್ಷಣದ ಮನಕಲಕುವ ದೃಶ್ಯ ಸೆರೆಯಾಗಿದೆ.
ಕೂಡಲೇ ಸ್ನೇಹಿತರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.