ತುಂಗಭದ್ರ ಜಲಾಶಯದ ಜಲಾನಯನ ಪ್ರದೇಶ ಮಲೆನಾಡಿನಲ್ಲಿ ಆರಂಭವಾಗಿರುವ ಮಳೆಯಿಂದ ಮತ್ತು ತುಂಗಾ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿದೆ.
ಇದರಿಂದ ಕಳೆದ ಎರಡು ದಿನಗಳಿಂದ ತುಂಗಭದ್ರ ಜಲಾಶಯಕ್ಕೆ ಹರಿದು ಬರುವ ನೀರಿನ ಒಳ ಹರಿವಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ.
ಜಲಾಶಯಕ್ಕೆ ಬೆಳಿಗ್ಗೆ 6372 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು, 1585.58 ಕ್ಕೆ ತಲುಪಿದೆ. ಜಲಾಶಯದಿಂದ ವಿಜಯನಗರದ ಕಾಲುವೆಗಳಿಗೆ 279 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಜಲಾಶಯದಲ್ಲಿ 6.923 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 2.079 ಟಿಎಂಸಿ ನೀರು ಸಂಗ್ರಹವಿತ್ತು. ಒಳ ಹರಿವು ಶೂನ್ಯದಲ್ಲಿತ್ತು.
ತುಂಗಾ ಜಲಾಶಯದಿಂದ 4352 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಸತತವಾಗಿ ಮಲೆನಾಡಿನಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.