Publish Date: Thu, 24 Sep 2015 (11:53 IST)
Updated Date: Thu, 24 Sep 2015 (11:58 IST)
ಸರ್ಕಾರಿ ಕಾರ್ಯ ನಿಮಿತ್ತ ನಿನ್ನೆ ರಾಷ್ಟ್ರ ರಾಜಧಾನಿ ನವದೆಹಲಿಗೆ ತಲುಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 11.30ರ ಸುಮಾರಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಸಂಬಂಧ ಚರ್ಚಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಹೌದು, ಸ್ವಚ್ಛತಾ ಅಭಿಯಾನದ ಸಲುವಾಗಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಮುಖ್ಯಮಂತ್ರಿಗಳ ಸಭೆಗೆಂದು ನಿನ್ನೆ ನವದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ಅಥವಾ ನಾಳೆ ಸೋನಿಯಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಸಂಬಂಧ ಚರ್ಚಿಸುತ್ತೇನೆ ಎಂದಿದ್ದರು. ಅಂತೆಯೇ ಇಂದು ನಗರದ ಜನಪತ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಸೋನಿಯಾ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ಅಧಿಕೃತವಾಗಿ ತಿಳಿಸಿವೆ.
ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಅಮೆರಿಕಾ ಪ್ರವಾಸದಲ್ಲಿದ್ದು, ವೈಯಕ್ತಿಕ ಕಾರಣಗಳಿಂದ ಸ್ವದೇಶಕ್ಕೆ ಆಗಮಿಸುತ್ತಿಲ್ಲ. ಅಲ್ಲದೆ ಅ.1ರ ಬಳಿಕ ಅವರು ಸ್ವದೇಶಕ್ಕೆ ವಾಪಾಸಾಗಲಿದ್ದು, ಈ ಸಂಬಂಧ ಅವರ ಉಪಸ್ಥಿತಿಯಲ್ಲಿಯೇ ಚರ್ಚಿಸಬೇಕು ಎಂದು ಹೇಳಿ ಚರ್ಚೆಗೆ ವರಿಷ್ಠರು ಚರ್ಚೆಗೆ ನಿರಾಕರಿಸಿದ್ದಾರೆ ಎಂದೂ ಹೇಳಲಾಗಿತ್ತು.