Publish Date: Tue, 25 Aug 2026 (10:19 IST)
Updated Date: Tue, 25 Aug 2026 (10:27 IST)
ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಕಟೌಟ್ ವಿಡಿಯೋಗೆ ಪಾಕಿಸ್ತಾನ ಪರ ಹಾಗೂ ಪ್ರಚೋದನಕಾರಿ ಹಾಡನ್ನು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು 23 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಆಚರಣೆಗಾಗಿ ಟಿಪ್ಪು ಸುಲ್ತಾನ್ ಅವರ ಸುಮಾರು 40 ಅಡಿ ಎತ್ತರದ ಕಟೌಟ್ ಒಂದನ್ನು ನಿರ್ಮಿಸಲಾಗಿತ್ತು. ಆದರೆ, ಈ ಕಟೌಟ್ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನೆ ಮತ್ತು ಮುಜಾಹಿದ್ದೀನ್ ಕುರಿತಾದ ಪ್ರಚೋದನಕಾರಿ ಹಾಡನ್ನು ಜೋಡಿಸಿ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. 'Chikkamagalur_power_tippuboys 209' ಎಂಬ ಸಾಮಾಜಿಕ ಜಾಲತಾಣದ ಖಾತೆಯಿಂದ ಈ ವಿಡಿಯೋ ಸಾರ್ವಜನಿಕವಾಗಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಈ ವಿಡಿಯೋ ಬಂದ ತಕ್ಷಣ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಪ್ರಚೋದನೆ ಸೃಷ್ಟಿಸುವ ಯತ್ನದ ವಿರುದ್ಧ ಸ್ವಯಂಪ್ರೇರಿತ ದೂರು (Suo Motu) ದಾಖಲಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಹಾಗೂ 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ವಿಡಿಯೋ ಹಂಚಿಕೊಂಡಿದ್ದ ಟಿಪ್ಪು ನಗರದ ನಿವಾಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ವಿಡಿಯೋ ಮೂಲದ ಪತ್ತೆಗೆ ಪೋಲಿಸ್ ಕಸರತ್ತು:
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯಾಮಾ ಅವರು ಮಾತನಾಡಿ, "ಟಿಪ್ಪು ಸುಲ್ತಾನ್ ಕಟೌಟ್ ಹಾಕುವುದು ಪ್ರತಿವರ್ಷದಂತೆ ಈ ಬಾರಿಯೂ ನಡೆದಿದೆ, ಅದಕ್ಕೆ ನಮ್ಮ ಅಭ್ಯಂತರವಿರಲಿಲ್ಲ. ಆದರೆ ಈ ವಿಡಿಯೋಗೆ ದೇಶವಿರೋಧಿ ಸಾಲುಗಳನ್ನು ಹೊಂದಿರುವ ಹಾಡನ್ನು ಹಿನ್ನೆಲೆಯಾಗಿ ಬಳಸಿ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಅಪರಾಧ. ಈ ವೀಡಿಯೋವನ್ನು ಮೊದಲು ಎಡಿಟ್ ಮಾಡಿ ತಯಾರಿಸಿದವರನ್ನು ಹಾಗೂ ಹಂಚಿಕೊಂಡವರನ್ನು ಪತ್ತೆಹಚ್ಚಲು ಮೆಟಾ ಸಂಸ್ಥೆಗೆ ಐಪಿ ವಿಳಾಸದ ಮಾಹಿತಿ ಕೋರಿ ಪತ್ರ ಬರೆಯಲಾಗಿದೆ" ಎಂದು ತಿಳಿಸಿದ್ದಾರೆ. ಸದ್ಯ ಈ ಘಟನೆಯಿಂದಾಗಿ ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ