ಹುಬ್ಬಳ್ಳಿ: ಕ್ರಿಶ್ಚಿಯನ್, ಹಿಂದು ಹಾಗೂ ಕೊಡವರನ್ನು ನರಸಂಹಾರ ಮಾಡಿದ ನರ ಹಂತಕ ಟಿಪ್ಪುವಿನ ಜಯಂತಿಯನ್ನು ಸರಕಾರ ಹಠಕ್ಕೆ ಬಿದ್ದು ಚರಣೆ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಎಂದು ಸಂಸದ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಯಿಂದ ಸರಕಾರಕ್ಕೇನು ಪ್ರಯೋಜನವಿದೆ ಎಂದು ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೆ, ಟಿಪ್ಪು ಎಲ್ಲರಂತೆ ಒಬ್ಬ ಸುಲ್ತಾನನಾಗಿದ್ದು, ತನ್ನ ರಾಜ್ಯವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಬ್ರಿಟಿಷರ ಜತೆ ಹೋರಾಡಿದ್ದಾನೆ. ರಾಜ್ಯದಲ್ಲಿ ಸಾಕಷ್ಟು ವಿರೋಧವಿದ್ದಾಗ ವೃಥಾ ತಲೆನೋವು ಯಾಕೆ ತಂದುಕೊಳ್ಳುತ್ತೀರಿ ಎಂದು ನ್ಯಾಯಾಲಯ ಹೇಳುವ ಮೂಲಕ ತನ್ನ ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ನಾಡಿನ ಅನೇಕ ಪ್ರಮುಖರು ಸಹ ಟಿಪ್ಪು ಜಯಂತಿಯನ್ನು ಬಲವಾಗಿ ವಿರೋಧಿಸುತ್ತಿದ್ದಾರೆ ಎಂದರು.
ನ್ಯಾಯಾಲಯದ ಸಲಹೆ, ಪ್ರಮುಖರ ವಿರೋಧವಿದ್ದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದು ಟಿಪ್ಪು ಜಯಂತಿಯನ್ನು ಆಚರಿಸಿಯೇ ಸಿದ್ಧ ಎನ್ನುತ್ತಿದ್ದಾರೆ. ಟಿಪ್ಪು ಸುಲ್ತಾನನೊಬ್ಬ ಮತಾಂಧನಾಗಿದ್ದು ಹಿಂದು, ಕ್ರಿಶ್ಚಿಯನ್ ಹಾಗೂ ಕೊಡವರನ್ನು ಸಂಹಾರ ಮಾಡಿದ ನರಹಂತಕ. ನ್ಯಾಯಾಲಯದ ಸಲಹೆ ಕೇಳಿಯಾದರೂ ಸಿದ್ದರಾಮಯ್ಯ ಪಾಠ ಕಲೆಯುತ್ತಾರೆ ಎಂದು ಭಾವಿಸಿದ್ದೇವೆ. ಈ ಕುರಿತು ಬಿಜೆಪಿಯ ಹೋರಾಟವಂತೂ ನಿರಂತರವಾಗಿರುತ್ತದೆ ಎಂದು ಸಂಸದ ಜೋಶಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ