Webdunia - Bharat's app for daily news and videos

Install App

ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ: ಗೂಳಿ ಸಾವು-ಹಸು ಗಂಭೀರ

Webdunia
ಗುರುವಾರ, 3 ಫೆಬ್ರವರಿ 2022 (21:15 IST)
ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಆರಂಭವಾಗಿದೆ. ಕುಟ್ಟಂದಿ ಗ್ರಾಮದ ಅಣ್ಣೀರ ಹರಿ ಎಂಬವರಿಗೆ ಸೇರಿದ ಹಸು ಹಾಗೂ ಗೂಳಿಯ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿದ್ದು, ಪರಿಣಾಮವಾಗಿ ಗೂಳಿ ಸಾವನ್ನಪ್ಪಿದರೆ, ಹಸು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ.
ಸುದ್ದಿ ತಿಳಿದ ರೈತ ಸಂಘದ ಕುಟ್ಟಂದಿ ಸಂಚಾಲಕ ಬೇರಂಡ ಕೆ.ಜಗನ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ ಮುಂದಾಳತ್ವದಲ್ಲಿ ಸ್ಥಳೀಯ ರೈತ ಮುಖಂಡರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಅಲ್ಲದೆ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರುಗಳು, ಜೀವನ್ಮರಣ ಸ್ಥಿತಿಯಲ್ಲಿರುವ ಹಸುವಿಗೆ ಕೂಡಲೇ ಸೂಕ್ತ ಚಿಕಿತ್ಸೆಗೆ ಒತ್ತಾಯಿಸಿದರು.
ಹಾಡಹಗಲೇ ಹುಲಿಯು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದರೂ ಅರಣ್ಯ
ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದನ್ನು ಖಂಡಿಸಿ, ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು, ಇಲ್ಲದಿದ್ದರೆ ಗೂಳಿಯ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿ ಮುಂದಿಟ್ಟು ಪ್ರತಿಭಟಿಸುವುದಾಗಿ‌ ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ಅರಣ್ಯ ವಲಯದ ಸಿಬ್ಬಂದಿ ದಿವಾಕರ್ ಅವರು, ಹುಲಿ ಸೆರೆಗೆ ಬೋನ್ ಅಳವಡಿಸುತ್ತೇವೆ.ಪರಿಹಾರ ವಿತರಿಸಲು ಕ್ರಮವಹಿಸುತ್ತೇವೆ ಎಂದರಲ್ಲದೆ, ಹಿರಿಯ ಅಧಿಕಾರಿಗಳು ಹೈಕೋರ್ಟ್‌ಗೆ ತೆರಳಿರುವುದರಿಂದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಜಾಯಿಷಿಕೆಯಿತ್ತರು.
ಇದಕ್ಕೆ ರೈತ ಮುಖಂಡರಾ ಉಮೇಶ್ ಕೇಚಮಯ್ಯ, ಬಾನಂಡ ಸ್ವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ವಿವಿಧ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ, ಚೊಟ್ಟೆಕಾಳಪಂಡ ಮನು ಆಗಮಿಸಿ, ಸ್ಥಳಕ್ಕೆ ಕೂಡಲೇ ಆಗಮಿಸುವಂತೆ ದೂರವಾಣಿ ಮೂಲಕ ಪೊನ್ನಂಪೇಟೆ ಅರಣ್ಯ ವಲಯ ಅರಣ್ಯಾಧಿಕಾರಿ ರಾಜಪ್ಪ ಅವರನ್ನು ಒತ್ತಾಯಿಸಿದರು.
ದೂರವಾಣಿ ಕರೆಗೆ ಓಗೊಟ್ಟು ಸ್ಥಳಕ್ಕೆ ಆಗಮಿಸಿದ ರಾಜಪ್ಪ ಅವರನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು.
ಜೀವನ್ಮರಣ ಸ್ಥಿತಿಯಲ್ಲಿರುವ ಹಸುವಿಗೆ ಕೂಡಲೇ ಚಿಕಿತ್ಸೆ ನೀಡಬೇಕು, ಮೃತ ಗೂಳಿಗೆ ಸಂಬಂಧಿಸಿದಂತೆ ಗರಿಷ್ಠ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಡಿಎಫ್ಒ ಚಕ್ರಪಾಣಿ ಅವರು ಸ್ಥಳಕ್ಕೆ ಆಗಮಿಸದೇ ಇಲ್ಲಿಂದ ತೆರಳಲು ಸಾಧ್ಯವಿಲ್ಲ. ಅಲ್ಲಿಯ ತನಕ ಅಧಿಕಾರಿಗಳನ್ನು ಇಲ್ಲಿಂದ ಕದಲಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಮುಖಂಡರ ಪ್ರತಿಭಟನೆ-ಅಧಿಕಾರಿಗಳಿಗೆ ದಿಗ್ಬಂಧನ: ರೈತ ಸಂಘ ಮುಖಂಡರ ದೂರವಾಣಿ ಕರೆಗೆ ಓಗೊಟ್ಟು ಆಗಮಿಸಿದ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ರಾಜಪ್ಪ ಹಾಗೂ ಇತರ ಸಿಬ್ಬಂದಿಗಳನ್ನು ತಡರಾತ್ರಿವರೆಗೂ ದಿಗ್ಬಂಧನ ಮಾಡಿದ ರೈತ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಿರಿಯ ಅಧಿಕಾರಿಗಳು ಆಗಮಿಸುವ ತನಕ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದರು.
ಆರ್.ಎಫ್.ಒ ಹಂತದಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಅತಿ ವಿರಳ, ದಿನದಿಂದ ದಿನಕ್ಕೆ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದೆ. ಹೀಗಾಗಿ ಹುಲಿಯ ಸೆರೆಗೆ ಶಾಶ್ವತ ಪರಿಹಾರ ಸಿಗದೇ ರೈತರು ನೊಂದಿದ್ದಾರೆ. ಆದ್ದರಿಂದ ರೈತ ಸಂಘ ಇಂತಹ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಸ್ಪಷ್ಟಪಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಗೋಣಿಕೊಪ್ಪ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.
ಈ ವೇಳೆ ರೈತ ಸಂಘದ ಮುಖಂಡರಾದ ಸುಳ್ಳಿಮಾಡ ಕಾವೇರಪ್ಪ, ಅಮ್ಮೆಕಂಡ ಚಂಗಪ್ಪ, ಮಿನ್ನಿಮಾಡ ಸಂಪತ್, ಬಾನಂಡ ನರೇಶ್, ತಟ್ಟಂಡ ಜೋಯಪ್ಪ, ಚಂದ್ರು ಗಣಪತಿ, ಮುಡಿಯಂಡ ದರ್ಶನ್, ಅಣ್ಣೀರ ವೀವೇಕ್ ಮುಂತಾದವರು ಉಪಸ್ಥಿತರಿದ್ದರು.
ಆಗಮಿಸಿದ ವೈದ್ಯರು: ಗ್ರಾಮಸ್ಥರ ಹಾಗೂ ರೈತ ಸಂಘದ ಮುಖಂಡರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪಶುವೈದ್ಯ ಇಲಾಖೆಯ ವೈದ್ಯ ಅಧಿಕಾರಿ ಡಾ. ಚಂದ್ರಶೇಖರ್‌ ಹಾಗೂ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿದರು.
ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ನೀಡಿದ ವೈದ್ಯರು, ಕನಿಷ್ಟ 45 ದಿನಗಳ ಚಿಕಿತ್ಸೆ ಅಗತ್ಯ ಎಂದು ವೈದ್ಯರು ದೃಢಪಡಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments