Publish Date: Wed, 07 Oct 2020 (11:38 IST)
Updated Date: Wed, 07 Oct 2020 (11:40 IST)
ದಾವಣಗೆರೆ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಕುರಿತಂತೆ ಬಂಧಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಕುರಿತಂತೆ ಈಗ ದಾವಣಗೆರೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಮೃತ ವ್ಯಕ್ತಿಯ ಪತ್ನಿ ಎರಡು ದಿನಗಳ ಮೊದಲು ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಬಳಿಕ ಕುಟುಂಬಸ್ಥರಿಗೆ ಈ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸುವಂತೆ ತಿಳಿಸಿದ್ದರು.
ಆದರೆ ಮರುದಿನ ಬಂಧಿತನ ಮೃತದೇಹ ಹತ್ತಿರದ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿತ್ತು. ಪೊಲೀಸರೇ ಆತನನ್ನು ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿ ಈ ರೀತಿ ನಾಟಕವಾಡಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಮೂವರನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ನಡೆಯುತ್ತಿದೆ.