Publish Date: Wed, 01 Jul 2026 (09:22 IST)
Updated Date: Wed, 01 Jul 2026 (09:31 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಮುಂಜಾನೆ ಸುರಿದ ಭೀಕರ ಮಳೆಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿಯಲ್ಲಿ ಬೆಟ್ಟದ ದರೆ ಮತ್ತು ತಡೆಗೋಡೆ ಕುಸಿದುಬಿದ್ದಿದೆ. ಈ ಭೀಕರ ಭೂಕುಸಿತಕ್ಕೆ (Landslide) ಕೆಳಗಿದ್ದ ಹಂಚಿನ ಮನೆಗಳು ಧ್ವಂಸಗೊಂಡಿದ್ದು, ಮಣ್ಣಿನಡಿ ಸಿಲುಕಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಹಾಗೂ ಓರ್ವ ಮಹಿಳೆ ಸೇರಿ ಮೂವರು ದುರಂತವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಬಿಹಾರ ಮೂಲದವರಾದ ಅನಮಿಕಾ (7 ವರ್ಷ), ಪರಿ (4 ವರ್ಷ) ಮತ್ತು ಶಾಂತಾ (35 ವರ್ಷ) ಎಂದು ಗುರುತಿಸಲಾಗಿದೆ. ಇವರು ಕಳೆದ 20 ವರ್ಷಗಳಿಂದ ಇಲ್ಲೇ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು.
ಬುಧವಾರ ಮುಂಜಾನೆ ಸುಮಾರು 4:45 ರಿಂದ 5:00 ಗಂಟೆಯ ಅವಧಿಯಲ್ಲಿ ಗರೋಡಿ-ನಾಗುರಿ ಸಂಪರ್ಕಿಸುವ ರಸ್ತೆಯ ಎತ್ತರದ ಗುಡ್ಡದ ಮೇಲಿದ್ದ ಕಾಂಪೌಂಡ್ ತಡೆಗೋಡೆ ಭಾರಿ ಮಳೆಗೆ ಸಡಿಲಗೊಂಡು ಕೆಳಗಿದ್ದ ನಾಲ್ಕು ಸಾಲು ಮನೆಗಳ ಮೇಲೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಮನೆಗಳ ಹಿಂಭಾಗದ ಗೋಡೆಗಳು ಸಂಪೂರ್ಣವಾಗಿ ಕುಸಿದು, ಮಣ್ಣಿನ ರಾಶಿ ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದಿದೆ. ಈ ವೇಳೆ ಎರಡು ಕುಟುಂಬಗಳು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿದ್ದವು.
ಘಟನಾ ಸ್ಥಳಕ್ಕೆ ತಕ್ಷಣವೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಅಗ್ನಿಶಾಮಕ ದಳ ಮತ್ತು ಮಂಗಳೂರು ನಗರ ಪೊಲೀಸರು ದಾವಿಸಿ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮಣ್ಣಿನ ದಿಬ್ಬ ಹಾಗೂ ಕಾಂಪೌಂಡ್‌ನ ಬೃಹತ್ ಕಲ್ಲುಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲು ಎನ್‌ಡಿಆರ್‌ಎಫ್ (NDRF) ಸಿಬ್ಬಂದಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಮಣ್ಣಿನಡಿಯಿಂದ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಹೊರತರಲು ಸಿಬ್ಬಂದಿ ನಡೆಸಿದ ಹೋರಾಟ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.
ರಕ್ಷಣಾ ಸಿಬ್ಬಂದಿ ಸತತ ಪರಿಶ್ರಮದ ಮೂಲಕ ಮಣ್ಣಿನ ರಾಶಿಯಿಂದ ಆಲ್ಕಾ (14 ವರ್ಷ), ಅನುಷ್ಕಾ (11 ವರ್ಷ) ಹಾಗೂ ಬಾಲಕೃಷ್ಣ (40 ವರ್ಷ) ಎಂಬುವವರನ್ನು ಜೀವಂತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಪರಿ ಮತ್ತು ಏಳು ವರ್ಷದ ಅನಮಿಕಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಮನೆಯಲ್ಲಿದ್ದ ಶಾಂತಾ ಎಂಬ ಮಹಿಳೆ ಮಣ್ಣಿನಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರೂ ಸಹ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹಾಗೂ ಸಿಟಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡರು. ಇತ್ತ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತಮ್ಮ ದೆಹಲಿ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಮಂಗಳೂರಿಗೆ ಮರಳುತ್ತಿದ್ದಾರೆ. ಗಾಯಗೊಂಡವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಮೃತರ ಕುಟುಂಬಸ್ಥರಿಗೆ ಇಂದೇ ತುರ್ತು ಪರಿಹಾರ ವಿತರಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ