ಬೆಂಗಳೂರು : ಜಗತ್ತಿನ ಅನೇಕ ದೇಶಗಳ ಸಂವಿಧಾನವನ್ನು ಓದಿ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಪರಿಗಣಿಸಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ನಮ್ಮ ದೇಶದ ಜನರ ರಾಜಕೀಯ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಳನ್ನು ಗಮನದಲ್ಲಿರಿಸಿಕೊಂಡು ಸಂವಿಧಾನವನ್ನು ಡಾ. ಬಿ.ಆರ್ .ಅಂಬೇಡ್ಕರ್ ರಚಿಸಿದರು ಎಂದು ಸಿಎಂ ಹೇಳಿದರು.
ಈ ದೇಶದಲ್ಲಿ ಎರಡು ಅಪಪ್ರಚಾರ ನಡೆಯುತ್ತಿದೆ. ಕೇವಲ ದಲಿತರ ಉದ್ದಾರಕ್ಕಾಗಿ ಸಂವಿಧಾನ ರಚನೆಯಾಗಿದೆ. ಹಾಗೂ ನಮ್ಮ ಪರಂಪರೆಗೆ ಸಂವಿಧಾನ ಅನುಗುಣವಾಗಿಲ್ಲ ಎಂಬುದು ಎರಡು ಮುಖ್ಯ ಆರೋಪಗಳಾಗಿವೆ ಎಂದು ನುಡಿದ ಸಿಎಂ ಸಿದ್ದರಾಮಯ್ಯ, ಜಾತಿಯ ಕಾರಣದಿಂದ ಉಂಟಾಗಿರುವ ಸಮಾಜದಲ್ಲಿ ರಾಜಕೀಯ ಅಸಮಾನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ ಉಂಟಾಗಿದೆ. ಈ ಅಸಮಾನತೆಯನ್ನು ಹೋಗಲಾಡಿಸಲು ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.
ಸಂವಿಧಾನಕ್ಕೆ ಅಪಾಯ ಒದಗುವುದನ್ನು ನಾವು ಯಾರೂ ಸಹಿಸಿಕೊಳ್ಳಬಾರದು. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಆದರೆ ಸಂವಿಧಾನಕ್ಕೆ ಧಕ್ಕೆ ಒದಗಿದರೆ ನಾವು ನಾಶವಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶನಿವಾರ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ, ಸ್ವಾತಂತ್ರ್ಯ. ಭ್ರಾತೃತ್ವ ಮೂರು ಸಂವಿಧಾನದ ಮುಖ್ಯ ಅಂಶಗಳಾಗಿವೆ. ಇದನ್ನು ಒಪ್ಪದವರು ಸಂವಿಧಾನದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಸಾಮಾಜಿಕ ಪ್ರಜಾಪ್ರಭುತ್ವವು ರಾಜಕೀಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಾಗ ಮಾತ್ರ ಸಂವಿಧಾನದ ಆಶಯ ಸಾರ್ಥಕವಾಗುತ್ತದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಇನ್ನೂ ಅಸಮಾನತೆ ಹೋಗಿಲ್ಲ. ಈ ರಾಜಕೀಯ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದೇ ಪ್ರತಿಯೊಂದು ಸರ್ಕಾರದ ಜವಾಬ್ದಾರಿ. ಎಂದು ನುಡಿದ ಸಿಎಂ ಸಂವಿಧಾನ ಯಶಸ್ವಿಯಾಗಬೇಕಾದರೆ , ಸಂವಿಧಾನದ ಆಶಯಗಳು ಯಾರ ಕೈಲಿ ಜಾರಿಯಾಗಬೇಕಿದೆ ಎಂಬುದು ಮುಖ್ಯ. ಯಾರು ಸಂವಿಧಾನದ ಮೇಲೆ ನಂಬಿಕೆಯಿಟ್ಟಿದ್ದಾರೋ ಅವರ ಕೈಗೆ ಅಧಿಕಾರ ಸಿಕ್ಕಿದರೆ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದರು.
ಸಚಿವ ಮಹದೇವಪ್ಪ, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಸ್ ಟಿ ಸೋಮಶೇಖರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ, ನಿವೃತ್ತ ಹಿರಿಯ ನ್ಯಾಯಾಧೀಶ ನಾಗಮೋಹನ್ ದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.