ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ ಸುಲಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ರೈತರ ಸಮಸ್ಯೆಗಳಿಗೆ ಸರಕಾರ ಕಾಳಜಿ ತೊರಿಸುತ್ತಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕಪ್ಪು ಕಾಣಿಕೆ ನೀಡುವವರಿಗೆ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ. ಈ ಕಟು ಸತ್ಯವನ್ನು ಬಹಿರಂಗ ಮಾಡುವುದಾಗಿ ಖುದ್ದು ಪ್ರಸಾದ್ ಅವರೇ ಹೇಳಿದ್ದಾರೆ ಎಂದರು.
ಬಿಜೆಪಿ ಪಕ್ಷ ಸೇರಲು ಅನೇಕ ಹಿರಿಯ ಮುಖಂಡರು ಮುಂದೆ ಬಂದಿದ್ದಾರೆ. ಸದ್ಯದಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದು, ಆ ಸಮಯದಲ್ಲಿ ಅನೇಕ ಹಿರಿಯ ನಾಯಕರು ಬಿಜೆಪಿ ಸೇರುವವರಿದ್ದಾರೆ ಎಂದು ತಿಳಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ದೊರೆತಿರುವ 2.5 ಕೋಟಿ ಹಣದ ಕುರಿತು ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮೂರನೇ ಮಹಡಿಯಲ್ಲಿನ ಸಚಿವರಿಗೆ ಕೊಡಲು 2.5 ಕೋಟಿ ಕಪ್ಪು ಹಣವನ್ನು ತಂದಿದ್ದರು ಎಂದು ಟಾಂಗ್ ನೀಡಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.